ತುಂಗಭದ್ರ ಡ್ಯಾಂ ಭರ್ತಿ: ರೈತ ಫುಲ್​ ಖುಶ್, ಆದ್ರೆ ಡ್ಯಾಂನಲ್ಲಿರೋ ಹೂಳು..?

ಕೊಪ್ಪಳ: ಬರದನಾಡು ಕೊಪ್ಪಳದ ರೈತರ ಪಾಲಿಗೆ ತುಂಗಭದ್ರಾ ಜೀವನದಿ. ಪಕ್ಕದ ಎರಡು ಜಿಲ್ಲೆ‌ಗಳಾದ ಬಳ್ಳಾರಿ, ರಾಯಚೂರಿಗೂ ಈ ನದಿ ಹರಿಯುತ್ತದೆ. ಅಲ್ಲದೇ ನೆರೆ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರದ ನೀರಿನ ಮೂಲ ಈ ತುಂಗಭದ್ರೆ.
ಕಳೆದ ಮೂರು ವರ್ಷಗಳಲ್ಲಿ ಮಳೆ ಸರಿಯಾಗಿ ಆಗಾದ ಕಾರಣ ಇಲ್ಲಿನ ರೈತ ತತ್ತರಿಸಿ ಕಂಗಾಲಾಗಿದ್ದ. ನದಿಯ ಅಚ್ಚುಕಟ್ಟು ಪ್ರದೇಶ ರೈತರಿಗೆ ಕೇವಲ ಒಂದು ಬೆಳೆಗೆ ಮಾತ್ರ ನೀರು ಒದಗಿಸಲಾಗಿತ್ತು. ಅನಿವಾರ್ಯವಾಗಿ ಟ್ಯಾಂಕರ್ ಮೂಲಕ ಬೆಳೆಗೆ ನೀರು ಹರಿಸಿದ ರೈತ 800 ರಿಂದ 1,000 ರೂ ನೀಡಿ ಟ್ಯಾಂಕರ್ ನೀರು ತಂದ ನಿದರ್ಶನಗಳಿವೆ. ಇಷ್ಟು ಮಾಡಿದರೂ ಅನ್ನದಾತನಿಗೆ ಅಪಾರ ನಷ್ಟವಾಗಿತ್ತು.
ಈ ಬಾರಿ ಈ ಭಾಗಕ್ಕೆ ಮಳೆರಾಯ ಕರುಣೆ ತೋರಿದ್ದಾನೆ. ಅನ್ನದಾತ ಭೂಮಿ ಹದ ಮಾಡಿ ಬಿತ್ತನೆ ಆರಂಭಿಸಿದ್ದಾನೆ. ಅತಿ ಹೆಚ್ಚು ಭತ್ತ ಬೆಳೆಯುವ ಈ ನಾಡಿನಲ್ಲಿ ಅನ್ನದಾತ ಒಂಚೂರು ನೆಮ್ಮದಿಯ ಉಸಿರು ಬಿಟ್ಟಿದ್ದಾನೆ. ಅಲ್ಲದೇ, ಕಳೆದ ಬಾರಿಗಿಂತ ಈ ಬಾರಿ ತುಂಗಭದ್ರಾ ನದಿಗೆ ಹೆಚ್ಚಾಗಿ‌ ನೀರು ಹರಿದು ಬಂದಿದೆ. ಇದು ಸಂತಸದ ಸಂಗತಿಯಾದ್ರೂ, ನದಿಯಲ್ಲಿ ತುಂಬಿರುವ ಹೂಳಿನ‌ ಪ್ರಮಾಣದ ಬಗ್ಗೆ ರೈತನಿಗೆ ಅಸಮಾಧಾನವಿದೆ. 32 ಟಿಎಂಸಿ ಅಷ್ಟು ನದಿಯಲ್ಲಿ ಹೂಳು ತುಂಬಿದೆ. ಕಳೆದ ಸಾಲಿನಲ್ಲಿ ರೈತರು ಮುಂದಾಗಿ ಹೂಳೆತ್ತಿದ್ದರು. ಆದ್ರೆ ಅದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ.
ತುಂಗಭದ್ರಲ್ಲೀಗ ಒಳಹರಿವು‌ ಹೆಚ್ಚಾಗಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿರುವುದರಿಂದ ಒಂದೇ ದಿನದಲ್ಲಿ 3 ಟಿಎಂಸಿ ನೀರು ಹರಿದು ಬರುತ್ತಿದೆ. ತುಂಗಭದ್ರ ಜಲಾನಯನ ಪ್ರದೇಶವಾದ ಮಲೆನಾಡಿನಲ್ಲಿನ ಮಳೆಯಿಂದಾಗಿ ಜಲಾಶಯಕ್ಕೆ 3 ಟಿಎಂಸಿ ನೀರು ಹರಿದು ಬರುತ್ತಿದ್ದು, ಇದರಿಂದ ತುಂಗಭದ್ರ ಜಲಾಶಯದ ಕಾಲುವೆಗಳ ಮೂಲಕ ತಮ್ಮ ಜಮೀನಿಗೆ ನೀರು ಪಡೆಯುವ ರಾಜ್ಯದ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ಮತ್ತು ಆಂಧ್ರ ಪ್ರದೇಶದ ಅನಂತಪುರಂ, ಕರ್ನೂಲ್ ಜಿಲ್ಲೆಗಳ ತುಂಗಭದ್ರ ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕಳೆದ ವರ್ಷಕ್ಕಿಂತ ಈ ವರ್ಷ ತುಂಗಭದ್ರ ಜಲಾಶಯದಲ್ಲಿ ನೀರಿನ ಮಟ್ಟ 1603 ಅಡಿ ಇದ್ದು, 8.75 ಟಿಎಂಸಿ ನೀರು ಸಂಗ್ರಹವಾಗಿದೆ. ಮಲೆನಾಡಿನಲ್ಲಿ ಹೆಚ್ಚಾಗಿ ಸುರಿಯುತ್ತಿರುವುದರಿಂದ ಈ ಜಲಾಶಯಕ್ಕೆ 15ರಿಂದ 25ಕ್ಕೂ ಹೆಚ್ಚು ಟಿಎಂಸಿ ನೀರು ಸಂಗ್ರಹವಾಗುವ ಸಾಧ್ಯತೆ ಇದೆ ಎಂದು ಡ್ಯಾಂನ ಅಧಿಕಾರಿಗಳ ಅಭಿಪ್ರಾಯಪಟ್ಟಿದ್ದಾರೆ.
ಜಲಾಶಯದಲ್ಲಿ ನೀರು ಸಂಗ್ರಹವಾಗುತ್ತಿರುವುದರಿಂದ ಸದ್ಯ ಕುಡಿಯುವ ನೀರಿನ ಸಮಸ್ಯೆ ನೀಗಿದಂತಾಗಿದೆ. ಆದ್ರೆ ಹೂಳಿನ ಸಮಸ್ಯೆ ರೈತರನ್ನು ಸದಾ ಕಾಡುತ್ತಿದೆ. ಜಲಾಶಯ 100.86 ಟಿಎಂಸಿ ಸಾಮರ್ಥ್ಯ ಹೊಂದಿದೆ. ಸದ್ಯ 24.63 ಟಿಎಂಸಿ ನೀರು ಇದೆ. ಅದರಲ್ಲಿ 32 ಟಿಎಂಸಿಯಷ್ಟು ಹೂಳು ತುಂಬಿದೆ. ರೈತರಿಗೆ ಉತ್ತಮ ಬೆಳೆಗೆ ಸಹಕಾರಿಯಾಗಿದ್ದರು, ರೈತರ ನಿರೀಕ್ಷೆಗೆ ಈ ನೀರು ಸಾಲಲ್ಲ. ಕಾರಣ ರೈತರಲ್ಲಿ ಕಾಡುತ್ತಿರುವ ಪ್ರಶ್ನೆ ಹೂಳು. ಈ ಹೂಳು ತೆಗೆಯುವುದಕ್ಕೆ ಸರ್ಕಾರ ಮುಂದಾಗಬೇಕು. ಈ ಭಾಗದ ರೈತರಿಗೆ ಜಲಾಶಯ ಉತ್ತಮ ನೀರು ಒದಗಿಸಬೇಕು ಅಂತ ಆಗ್ರಹ ಮಾಡಲಾಗಿದೆ.

ವಿಶೇಷ ವರದಿ: ರಾಜು ಬಿ.ಆರ್​

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv