ಕ್ಯಾಶ್​​ ತುಂಬಿಕೊಂಡು ಹೋಗ್ತಿದ್ದ ಟ್ರಕ್​​ಗೆ ಆಕಸ್ಮಿಕ ಬೆಂಕಿ: ಕಾಶ್ಮೀರದಲ್ಲಿ ನೋಟಿನ ಕಂತೆ ಸುಟ್ಟು ಬೂದಿ..!

ಶ್ರೀನಗರ: ಟ್ರಕ್​​ನಲ್ಲಿ ಕೊಂಡೊಯ್ಯಲಾಗ್ತಿದ್ದ ಕೋಟ್ಯಾಂತರ ರೂಪಾಯಿ ಹಣ ಸುಟ್ಟು ಕರಕಲಾದ ಶಾಕಿಂಗ್ ಘಟನೆ ಕಾಶ್ಮೀರದಲ್ಲಿ ನಡೆದಿದೆ. ದಕ್ಷಿಣ ಕಾಶ್ಮೀರದ ಅನಂತ್​ನಾಗ್​​​ ಜಿಲ್ಲೆಯ ಖಾಜಿಗುಂಡ್​​​ನಲ್ಲಿ ಕಳೆದ ಮಧ್ಯರಾತ್ರಿ ಟ್ರಕ್​ವೊಂದರಲ್ಲಿ ಹಣ ಹಾಗೂ ಇತರೆ ವಸ್ತುಗಳನ್ನ ಸಾಗಿಸಲಾಗ್ತಿತ್ತು. ಈ ವೇಳೆ ಟ್ರಕ್​ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಕೋಟ್ಯಾಂತರ ರೂಪಾಯಿ ಹಣ ಬೆಂಕಿಗಾಹುತಿಯಾಗಿದೆ.

ಈ ಟ್ರಕ್​ ಶ್ರೀನಗರದಿಂದ ಜಮ್ಮುವಿಗೆ ಹೋಗುತ್ತಿತ್ತು ಎಂದು ತಿಳಿದುಬಂದಿದೆ. ಬೆಂಕಿಗಾಹುತಿಯಾದ ಹಣ 500 ರೂಪಾಯಿ ಮುಖಬೆಲೆಯದ್ದಾಗಿತ್ತು. JKO5A-8795 ನಂಬರಿನ ಈ ಟ್ರಕ್​​ನಲ್ಲಿ ತಾಮ್ರದ ತಂತಿ, ಪಾತ್ರೆಗಳು, ತಗಡು ಹಾಗೂ ಇತರೆ ವಸ್ತುಗಳನ್ನ ಕೊಂಡೊಯ್ಯಲಾಗ್ತಿತ್ತು. ಇದರ ಮಧ್ಯೆ ನೋಟಿನ ಕಂತೆಗಳು ಕೂಡ ಇದ್ದವು. ಟ್ರಕ್​​ಗೆ ಬೆಂಕಿ ಹೊತ್ತಿಕೊಂಡ ಬಳಿಕ ವಾಹನದಲ್ಲಿ ಕ್ಯಾಶ್​​ ಇದ್ದಿದ್ದು ಬಯಲಾಗಿದೆ. ಕೆಳಗೆ ಬಿದ್ದಿದ್ದ ಅರೆಬರೆ ಸುಟ್ಟ ನೋಟುಗಳನ್ನ ಇಲ್ಲಿನ ನಿವಾಸಿಗಳು ಎತ್ತಿಕೊಂಡಿದ್ದಾರೆ.

ಇನ್ನು ಟ್ರಕ್​ ಚಾಲಕನನ್ನು ಈ ಬಗ್ಗೆ ವಿಚಾರಿಸಿದಾಗ, ತನ್ನ ವಾಹನದಲ್ಲಿ ಹಣ ಇದ್ದಿದ್ದು ಗೊತ್ತೇ ಇರಲಿಲ್ಲ ಎಂದು ಹೇಳಿದ್ದಾನೆ ಎಂದು ವರದಿಯಾಗಿದೆ. ಸದ್ಯ ಈ ಘಟನೆ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲಿಸರು ತನಿಖೆ ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆ ಹೊತ್ತಲ್ಲೇ ಈ ಘಟನೆ ನಡೆದಿರೋದ್ರಿಂದ ಸಹಜವಾಗೇ ಈ ಘಟನೆ ಚುನಾವಣಾ ಆಯೋಗದ ಗಮನವನ್ನೂ ಸೆಳೆಯಲಿದೆ. ಈ ಹಣವನ್ನ ಚುನಾವಣೆಯಲ್ಲಿ ಮತದಾರರಿಗೆ ಆಮಿಷವೊಡ್ಡಲು ಬಳಸಲಾಗ್ತಿತ್ತಾ ಎಂಬುದು ತನಿಖೆಯ ವಿಷಯವಾಗಲಿದೆ. ಒಂದು ವೇಳೆ ಹೌದು ಎಂದಾದರೆ ಅದು ಯಾವ ಪಕ್ಷಕ್ಕೆ ಸೇರಿದ್ದು ಎಂಬ ಬಗ್ಗೆ ತನಿಖೆ ನಡೆಯಲಿದೆ.

ಇನ್ನು ರಾಜಕೀಯ ಪಕ್ಷಗಳು ಮತದಾರರಿಗೆ ಆಮಿಷವೊಡ್ಡಲು ಬಳಸುವ ಹಣ, ಮದ್ಯ ಹಾಗೂ ಇತರೆ ವಸ್ತುಗಳನ್ನ ಚುನಾವಣಾ ಆಯೋಗ ಸೀಜ್ ಮಾಡುತ್ತಲೇ ಬಂದಿದೆ. ಈವರೆಗೆ ಚುನಾವಣಾ ಆಯೋಗ ದೇಶಾದ್ಯಂತ 600 ಕೋಟಿ ಮೊತ್ತದ ನಗದು ಹಾಗೂ ಇತರೆ ವಸ್ತುಗಳನ್ನ ಸೀಜ್ ಮಾಡಿದೆ.

 


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv