ಸದಾನಂದಗೌಡರ ಪುತ್ರನಿಗೆ ಮತ್ತೆ ‘ಮೈ’ತ್ರಿಯಾ ಗೌಡ ಶಾಕ್..!

ಬೆಂಗಳೂರು: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪುತ್ರ ಕಾರ್ತಿಕ್ ಗೌಡಗೆ ಮತ್ತೆ ಸಂಕಷ್ಟ ಎದುರಾಗಿದೆ. ಮೈತ್ರಿಯಾ ಗೌಡ ಪ್ರಕರಣದಲ್ಲಿ ಕಾರ್ತಿಕ್​ ಗೌಡಗೆ ಮತ್ತೆ ವಿಚಾರಣೆ ಎದುರಿಸಬೇಕಾಗಿದೆ.

ಕಾರ್ತಿಕ್​ಗೌಡ ವಿರುದ್ಧ ಮೈತ್ರಿಯಾಗೌಡ ಮಾಡಿರುವ ಆರೋಪ ಪ್ರಕರಣದಲ್ಲಿ ‘ಯಾವುದೇ ಅತ್ಯಾಚಾರ ನಡೆದಿಲ್ಲ’ ಎಂದು ಪೊಲೀಸರು ಈ ಹಿಂದೆ ಜಿಲ್ಲಾ ಕೋರ್ಟ್​ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅಲ್ಲದೇ ಅತ್ಯಾಚಾರ ನಡೆದಿದೆ ಎಂಬುದಕ್ಕೆ ಸಾಕ್ಷ್ಯಗಳು ಇಲ್ಲ ಎಂದು ಕಾರ್ತಿಕ್​ಗೌಡ ವಿರುದ್ಧದ 376 ಸೆಕ್ಷನ್ ತೆಗೆಯಲಾಗಿತ್ತು. ಪೊಲೀಸರು ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನ ಪ್ರಶ್ನಿಸಿ ಮೈತ್ರಿಯಾಗೌಡ ಹೈಕೋರ್ಟ್​ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್​ನಲ್ಲೂ ಮೈತ್ರಿಯಾಗೌಡ ಮುಖಭಂಗ ಅನುಭವಿಸಿದ್ದರು.

ಹೈಕೋರ್ಟ್​ ತೀರ್ಪು ಬಳಿಕ ಮೈತ್ರಿಯಾಗೌಡ ಪ್ರಕರಣದ ದೋಷಾರೋಪ ಪಟ್ಟಿಯ ಮೇಲೆ ಚಾಲೆಂಜ್ ಮಾಡಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್, ಪ್ರಕರಣದ ವಿಚಾರಣೆಯನ್ನ ಜಿಲ್ಲಾ ನ್ಯಾಯಾಲಯದಲ್ಲಿ ನಡೆಸುವ ಅಗತ್ಯ ಇದೆ. ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂಬುದರ ಬಗ್ಗೆ ಸಾಕ್ಷ್ಯ ಇದ್ರೆ ತನಿಖೆ ಮಾಡಿ. ಮತ್ತೆ ತನಿಖೆ ಮಾಡುವ ಅಗತ್ಯ ಕಾಣುತ್ತಿದೆ. ಹೀಗಾಗಿ ಪ್ರಕರಣವನ್ನು ಮರು ತನಿಖೆ ಮಾಡುವಂತೆ ಸುಪ್ರೀಂಕೋರ್ಟ್​ ಆದೇಶ ನೀಡಿದೆ.

ಇದರಿಂದಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪುತ್ರ ಕಾರ್ತಿಕ್​ ಗೌಡಗೆ ಮತ್ತೆ ಸಂಕಷ್ಟ ಎದುರಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv