ದಸರಾ ದರ್ಬಾರ್​​ನಲ್ಲಿ ಟ್ರಿನ್ ಟ್ರಿನ್ ಸೈಕಲ್ ಸವಾರಿ..!

ಮೈಸೂರು: ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ 3 ನೇ ದಿನವಾದ ಇಂದು ಸಹ ನಗರದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಿನ್ನೆ ಪಾರಂಪರಿಕ ನಡಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಾಂಪ್ರದಾಯಿಕ ಧಿರಿಸು ಧರಿಸಿ ಮೈಸೂರಿನ ನಾಗರಿಕರು ಉತ್ಸಹದಿಂದ ಪಾಲ್ಗೊಂಡಿದ್ದರು. ಹಬ್ಬದ ಸಾಂಸ್ಕೃತಿಕ ಚಟುವಟಿಕೆಯ ಭಾಗವಾಗಿ ಇಂದು ಪಾರಂಪರಿಕ ಸೈಕಲ್​ ಸವಾರಿಯನ್ನು ಏರ್ಪಡಿಸಲಾಗಿತ್ತು. ಸಚಿವರಾದ ಜಿಟಿ ದೇವೇಗೌಡ ಹಾಗೂ ಸಾ.ರಾ.ಮಹೇಶ್​​ ಟ್ರಿಣ್ ಟ್ರಿಣ್ ಸೈಕಲ್ ಏರಿ ಚಲಾಯಿಸಿದರು. ಈ ವೇಳೆ ಸಚಿವರ ಜೊತೆ ಅಧಿಕಾರಿಗಳು ಸಹ ಸೈಕಲ್​ ಸವಾರಿ ಮಾಡಿದರು. ಟೌನ್‌ಹಾಲ್‌ನಿಂದ ಸೈಕಲ್​ ಸವಾರಿ ಶುರುವಾಯ್ತು. ಜನರು ಮೈಸೂರು ಪೇಟ ತೊಟ್ಟು ಸುಮಾರು ಎರಡೂವರೆ ಗಂಟೆಗಳ ಕಾಲ ಸೈಕಲ್ ಸವಾರಿ ಮಾಡಿ, ಪುರಭವನ, ದೊಡ್ಡ ಗಡಿಯಾರ, ಮೈಸೂರು ಅರಮನೆ, 10ನೇ ಚಾಮರಾಜ ಒಡೆಯರ್ ವೃತ್ತ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ಲ್ಯಾನ್ಸ್‌ಡೌನ್ ಕಟ್ಟಡ, ಜಗನ್ ಮೋಹನ ಅರಮನೆ, ಪರಕಾಲ ಮಠ, ಶೇಷಾದ್ರಿ ಹೌಸ್, ಪದ್ಮಾಲಯ, ಚಾಮುಂಡಿ ಅತಿಥಿ ಗೃಹ, ಪ್ರಾಚ್ಯವಿದ್ಯಾ ಸಂಶೋಧನಾಲಯ, ಕ್ರಾಫರ್ಡ್ ಹಾಲ್, ಜಿಲ್ಲಾಧಿಕಾರಿ ಕಚೇರಿ, ಮಹಾರಾಜ ಕಾಲೇಜು, ಮೆಟ್ರೋಪಾಲ್ ವೃತ್ತ, ರೈಲ್ವೆ ನಿಲ್ದಾಣ ಹಾಗೂ ಮೈಸೂರು ಮೆಡಿಕಲ್ ಕಾಲೇಜು ಕಟ್ಟಡಗಳ ದರ್ಶನ ಮಾಡಿದರು. ಈ ವೇಳೆ ಕಟ್ಟಡಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.