ಟ್ರೀ-ಟ್ರಾನ್ಸ್​​ ಲೊಕೇಶನ್ ಮೂಲಕ ನೂರಾರು ಮರಗಳಿಗೆ ಮರುಜೀವ

ಕೊಪ್ಪಳ: ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಹೆಸರಿನಲ್ಲಿ ಮರಗಳ ಮಾರಣ ಹೋಮ ನಡೆಯುತ್ತಿರುವುದನ್ನು ತಡೆಯಲು ಅರಣ್ಯಇಲಾಖೆ ಪರಿಹಾರ ಮಾರ್ಗವೊಂದನ್ನ ಕಂಡುಕೊಂಡಿದೆ. ಅದರ ಹೆಸರು ಟ್ರೀ-ಟ್ರಾನ್ಸ್ ಲೊಕೇಶನ್. ಕಳೆದ ಒಂದು ವರ್ಷದಿಂದ ಹುಬ್ಬಳ್ಳಿ, ಕೊಪ್ಪಳ ಹಾಗೂ ಬಳ್ಳಾರಿ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 63ರ ರಸ್ತೆ ಅಗಲಿಕರಣ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ರಸ್ತೆ ಬದಿಯಲ್ಲಿರುವ ಮರಗಳನ್ನು ನೆಲಕ್ಕುರುಳಿಸಲಾಗುತ್ತಿದೆ. ಆದ್ರೆ ಇದರಲ್ಲಿ ಕೆಲವು ಮರಗಳನ್ನು ಅರಣ್ಯ ಇಲಾಖೆ ಟ್ರೀ- ಟ್ರಾನ್ಸ್ ಲೊಕೇಶನ್ ಮಾಡುವ ಮೂಲಕ ಮರಗಳಿಗೆ ಮರುಜೀವ ನೀಡಿದೆ.
ಈಗಾಗಲೇ ಅರಣ್ಯ ಇಲಾಖೆ ಆಲದಮರ, ಅರಳಿ ಹಾಗೂ ಬಸರಿ ಜಾತಿಯ 25ಕ್ಕೂ ಹೆಚ್ಚು ಮರಗಳಿಗೆ ಮರುಜನ್ಮ ನೀಡಿದೆ. ಜೆಸಿಬಿ ಕ್ರೇನ್​ಗಳನ್ನ ಬಳಸಿ, ಮರಗಳನ್ನು ಲಾರಿಯಲ್ಲಿ ಡಂಪ್ ಮಾಡಿ, ಇನ್ನೊಂದು ಸ್ಥಳದಲ್ಲಿ ಅವುಗಳನ್ನ ನೆಟ್ಟು, ಅಗತ್ಯ ಗೊಬ್ಬರ, ಪೋಷಕಾಂಶಗಳನ್ನ ಒದಗಿಸಿ ಮರಗಳು ಪುನಃ ಚಿಗುರುವಂತೆ ನೋಡಿಕೊಳ್ಳಲಾಗ್ತಿದೆ. ಈ ಹಿಂದೆ ಗದಗ ಮತ್ತು ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲೂ ಇದೇರೀತಿ 350 ಕ್ಕೂ ಹೆಚ್ಚು ಮರಗಳಿಗೆ ಇಲಾಖೆ ಮರುಜನ್ಮ ನೀಡಿತ್ತು.