ದಸರಾ ಸಂಭ್ರಮಕ್ಕೆ ಆಕಾಶ್ ಅಂಬಾರಿ, ಕೇವಲ ₹999ಗೆ ಮೈಸೂರಿಗೆ ಹಾರಿ..!

ಮೈಸೂರು:  ಮೈಸೂರು ದಸರಾ ಎಷ್ಟೊಂದು ಸುಂದರ, ಇದನ್ನು ಕಣ್ತುಂಬಿಕೊಳ್ಳಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಆದ್ರೆ, ದಸರಾ ವೇಳೆಯಲ್ಲಿ ಬೆಂಗಳೂರಿನಿಂದ-ಮೈಸೂರಿಗೆ ಹೋಗೋದು ಅಂದ್ರೆ ಹೆಚ್ಚಿನವರಿಗೆ ಗೋಳೋ ಗೋಳು, ಕಾರಣ ಟ್ರಾಫಿಕ್..! ಸಾವಿರಾರು ಕಾರುಗಳು, ಬಸ್ಸುಗಳು.. ಈ ವೇಳೆ ರಾಜ್ಯ ರಾಜಧಾನಿಯಿಂದ ಮೈಸೂರಿಗೆ ಹೋಗೋಕೆ ಕೆಲವೊಮ್ಮೆ ಮೂರ್ನಾಲ್ಕು ಗಂಟೆಗಳೂ ಆಗಿದ್ದಿದೆ. ಹೀಗಾಗಿ, ಸ್ಥಳೀಯ ಬೆಂಗಳೂರಿಗರು, ಬೆಂಗಳೂರಿನಲ್ಲಿರುವ ವಿದೇಶಿಗರು ಮನಸ್ಸಿದ್ದರೂ, ಮೈಸೂರಿಗೆ ಹೋಗಲು ಹಿಂಜರಿಯುತ್ತಾರೆ. ಇಂಥವರಿಗಾಗಿಯೇ ಈಗ ಬಂದಿದೆ ಆಕಾಶ್ ಅಂಬಾರಿ..!

ಹೌದು. ದಸರಾ ಹಬ್ಬಕ್ಕೆ ಮತ್ತಷ್ಟು ವಿದೇಶಿ ಪ್ರವಾಸಿಗರನ್ನ ಸೆಳೆಯಲು ಪ್ರವಾಸೋದ್ಯಮ‌ ಇಲಾಖೆ ಆಕಾಶ್​ ಅಂಬಾರಿ ಹೆಸರಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ವಿಮಾನ ವ್ಯವಸ್ಥೆ ಮಾಡಿದೆ. ಈ ಬಾರಿ ವಿನೂತನ ‌ಪ್ರಯತ್ನಕ್ಕೆ ಕೈ ಹಾಕಿರುವ ಪ್ರವಾಸೋಧ್ಯಮ ಇಲಾಖೆ, ಮೊದಲಿದ್ದ 7 ಆಸನದ ಲಘು ವಿಮಾನದ ಬದಲು 72 ಆಸನದ ಮಧ್ಯ ಗಾತ್ರದ ವಿಮಾನದ ವ್ಯವಸ್ಥೆ ಮಾಡಿದೆ.

ನವರಾತ್ರಿಯ 9 ದಿನಗಳ ಕಾಲ ಆಕಾಶ್​ ಅಂಬಾರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 2.10ಗಂಟೆಗೆ ಹೊರಟು ಮೈಸೂರಿಗೆ 3ಗಂಟೆಗೆ ತಲುಪಲಿದೆ. ಮತ್ತೆ ಮೈಸೂರಿನ ಮಂಡಕಳ್ಳಿ‌ ವಿಮಾನ‌ ನಿಲ್ದಾಣದಿಂದ 3.30ಗಂಟೆಗೆ ‌ಹೊರಟು 4 ಗಂಟೆಗೆ ಬೆಂಗಳೂರು ತಲುಪಲಿದೆ. ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಆಕಾಶ್​ ಅಂಬಾರಿಯ ಪ್ರವಾಸದಲ್ಲಿ ರಿಯಾಯಿತಿ ನೀಡಲಾಗಿದ್ದು, ಕೇವಲ ₹999 ರೂಗೆ ಪ್ರಯಾಣಿಸಬಹುದಾಗಿದೆ. ಈಗಾಗಲೇ 600ಕ್ಕೂ ಹೆಚ್ಚು ಮಂದಿ ಆಕಾಶ್​ ಅಂಬಾರಿಯಲ್ಲಿ ಪ್ರಯಾಣಿಸಲು ನೋಂದಾವಣಿ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv