ನಿಮ್ಮ ಹೊಸ ವರ್ಷದ ರೆಸಲ್ಯೂಷನ್​ ಏನಿರಬೇಕು..?!

ವರ್ಷಗಳು ಕಳೆದಂತೆ  ಕ್ಯಾಲೆಂಡರ್​ ಚೇಂಜ್​ ಆಗುತ್ತೆ. ಹಾಗೇ ನಮ್ಮ ಜೀವನದಲ್ಲಿ ಏನೇನೋ ಬದಲಾವಣೆಗಳಾಗುತ್ತವೆ. ಹೊಸವರ್ಷದ ಜೊತೆಗೆ ನೀವು ಆರೋಗ್ಯಕರವಾಗಿ, ಸಂತೋಷವಾಗಿರಲು ಸಾಧ್ಯವಾಗುವಂತಹ ಕೆಲವು  ಸಿಂಪಲ್​ ಟಿಪ್ಸ್​ಗಳನ್ನ  ಪ್ರಾರಂಭಿಸಬೇಕಾಗುತ್ತದೆ. ಅದಕ್ಕಾಗಿ ನೀವು ಪ್ರತಿದಿನವೂ ಮಾಡಬಹುದಾದ ಕೆಲವು ಸರಳ ಪದ್ಧತಿಗಳಿವೆ ಮತ್ತು ಇದು ನಿಮ್ಮ ಆರೋಗ್ಯದ ಮೇಲೆ  ಉತ್ತಮ ಪ್ರಭಾವವನ್ನು ಬೀರುತ್ತವೆ. ಈ ತ್ವರಿತ, ಸ್ಮಾರ್ಟ್ ಮತ್ತು ಆರೋಗ್ಯಕರ ಜೀವನ ಶೈಲಿ ಬದಲಾವಣೆಗಳು ನಿಮಗೆ ಉತ್ತಮ ಆರೋಗ್ಯವನ್ನ ಒದಗಿಸುತ್ತವೆ. ಇದಕ್ಕಾಗಿ ಕೆಲವು ಸರಳ ಮತ್ತು ಆರೋಗ್ಯಕರ ಹೊಸ ವರ್ಷದ ರೆಸಲ್ಯೂಷನ್​ಗಳನ್ನ ತೆಗೆದುಕೊಳ್ಳುವುದು ಬಹಳ ಅಗತ್ಯ. ಉದಾಹರಣೆಗೆ  ಕಿರಾಣಿ ಅಂಗಡಿಯಿಂದ ಉತ್ಪನ್ನಗಳನ್ನು ಖರೀದಿಸುವುದಕ್ಕೆ ಮುಂಚಿತವಾಗಿ ಪೌಷ್ಠಿಕಾಂಶದ ಲೇಬಲ್​ಳನ್ನು ಓದುವುದು, ಸಮತೋಲಿತ ಆಹಾರವನ್ನ ಸೇವಿಸುವುದು, ಒತ್ತಡವನ್ನ ನಿರ್ವಹಿಸುವುದು ಮತ್ತು ಅತಿಯಾಗಿ ತಿನ್ನುವುದನ್ನ ಕಡಿಮೆ ಮಾಡುವುದು.

ನಿಮ್ಮ ಹೊಸ ವರ್ಷದ ರೆಸಲ್ಯೂಷನ್​ ಹೀಗಿರಲಿ..

1. ಸಾಕಷ್ಟು ನಿದ್ರೆ ಮಾಡಿ: ನಿದ್ರೆಯ ಕೊರತೆಯಾದ್ರೆ ತೂಕ ಹೆಚ್ಚಾಗುವ ಸಾಧ್ಯತೆಗಳು ಹೆಚ್ಚಿರುತ್ತೆ ಹಾಗಾಗಿ ಸಾಕಷ್ಟು ನಿದ್ರೆ ಮಾಡಿ. ಕಡಿಮೆ ನಿದ್ರೆ  ನಿಮ್ಮ ಇಮ್ಯೂನಿಟಿಯನ್ನ ಕಡಿಮೆ ಮಾಡುತ್ತವೆ. ಅಲ್ಲದೇ ಮೆದುಳಿನ ಆರೋಗ್ಯದ ಮೇಲೆ ಪ್ರಭಾವ ಬೀರುವಂತಹ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಉತ್ತಮ  ಆರೋಗ್ಯಕ್ಕೆ ಎಂಟು ಗಂಟೆಗಳ ಕಾಲ ಸಾಕಷ್ಟು ನಿದ್ರೆ ಬಹಳ ಮುಖ್ಯ.

2. ಬೆಳಿಗ್ಗೆ ಎದ್ದ ಕೂಡಲೇ ಮೊದಲು ಒಂದು ಗ್ಲಾಸ್​ ನೀರನ್ನ ಸೇವಿಸಿ
ಬೆಳಗ್ಗೆ ಎದ್ದ ಕೂಡಲೇ ಒಂದು ಗ್ಲಾಸ್​ ನೀರನ್ನ ಸೇವಿಸುವುದರಿಂದ ನಿಮ್ಮ  ಜೀರ್ಣಕ್ರಿಯೆಯಲ್ಲಿ  ಸಹಾಯವಾಗುತ್ತದೆ.  ಮತ್ತು ತೂಕವನ್ನ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.  ಇಡೀ ದಿನ  ನೀವು ಆ್ಯಕ್ಟೀವ್​ ಆಗಿರಲು ಇದು ಬಹಳ ಸಹಕಾರಿ. ಆದ್ದರಿಂದ  ಬೆಳಿಗ್ಗೆ ಚಹಾ ಅಥವಾ ಕಾಫಿ ಸೇವಿಸುವ ಮೊದಲು ನೀರನ್ನ ಸೇವಿಸಿ.

3. ನಿಯಮಿತ ದೈಹಿಕ ವ್ಯಾಯಾಮ: ಪ್ರತಿದಿನ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಉತ್ತಮ ಎಲ್ಲರಿಗೂ ಗೊತ್ತಿರುವ ವಿಷಯ. ವಾಕಿಂಗ್, ಯೋಗ, ಈಜು, ಜಾಗಿಂಗ್ ಈ ರೀತಿಯ ಸಿಂಪಲ್​ ವ್ಯಾಯಾಮಗಳು ನಿಮ್ಮನ್ನ ಇನ್ನಷ್ಟು ಹೆಲ್ದಿಯಾಗಿರಿಸಲು ಸಹಾಯ ಮಾಡುತ್ತದೆ.

4. ಸ್ಟ್ರೆಚಿಂಗ್: ರಾತ್ರಿ ಮಲಗುವ  ಮುನ್ನಾ,  ಕೆಲವು ಸಿಂಪಲ್​ ಸ್ಟ್ರೆಚಿಂಗ್​ ವ್ಯಾಯಾಮಗಳನ್ನ ಮಾಡಿ. ಇದು ಸ್ನಾಯುಗಳನ್ನು ಬಿಗಿಗೊಳಿಸಿ, ನಿಮ್ಮನ್ನ ಮತ್ತಷ್ಟು ಸ್ಟ್ರಾಂಗ್​ ಮಾಡುತ್ತದೆ. ಈ ವ್ಯಾಯಾಮಗಳು  ಜಾಯಿಂಟ್​ ಪೇಯಿನ್​ ಮತ್ತು ಅಂಗಾಂಶಗಳ ಹಾನಿಯನ್ನು ತಡೆಗಟ್ಟುತ್ತದೆ.

5. ಧ್ಯಾನ: ಧ್ಯಾನ ನಿಮ್ಮನ್ನ  ಹೆಚ್ಚು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಧ್ಯಾನಕ್ಕಿಂತ ಮತ್ತೊಂದು ಸ್ಟ್ರೆಸ್​ಬಸ್ಟರ್​ ಮತ್ತೊಂದಿಲ್ಲ. ಧ್ಯಾನ ಮಾಡುವುದರಿಂದ ನಿಮ್ಮ ಮನಸ್ಸು ಯಾವಾಗಲೂ ಪ್ರಶಾಂತವಾಗಿರುತ್ತದೆ. ನಿಮ್ಮ ಆಲೋಚನಾ ಶಕ್ತಿಯು ವೃದ್ಧಿಸುತ್ತದೆ.

6. ಪ್ಯಾಕ್​ ಮಾಡಿರುವ ಆಹಾರಗಳನ್ನ ಸೇವಿಸದಿರಿ: ಈಗಿನ ಫಾಸ್ಟ್​ ಲೈಫ್​​​ನಲ್ಲಿ  ಸಮಯದ ಅಭಾವ, ಕೆಲಸದ ಒತ್ತಡದಿಂದ ಹೆಚ್ಚಿನವರು, ಪ್ಯಾಕೇಜ್​ ಫುಡ್​ಗಳ ಮೊರೆ ಹೋಗುತ್ತಾರೆ. ಈ ಪ್ಯಾಕೇಜ್​ ಫುಡ್​ಗಳಲ್ಲಿ ಪ್ರಿಸರ್​ವೇಟೀವ್ಸ್​ಗಳನ್ನ ಹೆಚ್ಚಾಗಿ ಬಳಸಿರುತ್ತಾರೆ. ಇದು ನಿಮ್ಮ ಆರೋಗ್ಯದ  ಮೇಲೆ  ಗಂಭೀರ ಪರಿಣಾಮಗಳನ್ನ ಬೀರುತ್ತದೆ. ನಿಮ್ಮ ದೇಹಕ್ಕೆ ಪೌಷ್ಠಕಾಂಶಗಳ ಕೊರತೆ ಉಂಟಾಗುವುದರ  ಜೊತೆಗೆ ತೂಕವನ್ನ ಹೆಚ್ಚಿಸುತ್ತದೆ. ​

7. ಮಾರ್ನಿಂಗ್​ ಬ್ರೇಕ್​ಫಾಸ್ಟ್​ ಸ್ಕಿಪ್​ ಮಾಡಬೇಡಿ:  ಬೆಳಗ್ಗಿನ ಉಪಹಾರ ದೇಹಕ್ಕೆ ತುಂಬಾ ಮುಖ್ಯ. ಮಾರ್ನಿಂಗ್​ ತಪ್ಪದೇ  ಬ್ರೇಕ್​ಫಾಸ್ಟ್​ ಮಾಡೋದ್ರಿಂದ  ನೀವು ಹೆಚ್ಚು ಆ್ಯಕ್ಟಿವ್​ ಆಗುತ್ತೀರಾ.  ಮೊಟ್ಟೆ, ಓಟ್ಸ್​, ಸ್ಯಾಂಡ್ವಿಚ್ ಅಥವಾ ಪ್ರೋಟೀನ್ ಹೆಚ್ಚು ಇರುವ ಆಹಾರಗಳನ್ನ ನೀವು  ಮಾರ್ನಿಂಗ್​ ಬ್ರೇಕ್​ಫಾಸ್ಟ್​ನಲ್ಲಿ ಸೇವಿಸಬಹುದು.

8.  ಸಕ್ಕರೆ ಬಳಕೆ ಮಿತಿಯಲ್ಲಿರಲಿ:  ಅತಿಯಾದ ಸಕ್ಕರೆ ಸೇವನೆ   ನಿಮ್ಮ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ.  ಅಷ್ಟೇ ಅಲ್ಲಾ  ಸಕ್ಕರೆ ಸೇವನೆ ನಿಮ್ಮ ತೂಕ ಹೆಚ್ಚಾಗುವಂತೆ ಮಾಡುವುದರ ಜೊತೆಗೆ ನಿಮ್ಮ ರಕ್ತದಲ್ಲಿ  ಸಕ್ಕರೆ ಪ್ರಮಾಣವನ್ನ ಹೆಚ್ಚಿಸುತ್ತದೆ. ಸಕ್ಕರೆ ಬದಲಾಗಿ ಬೆಲ್ಲ, ಜೇನುತುಪ್ಪ, ತೆಂಗಿನ ಸಕ್ಕರೆಗಳನ್ನ ಪರ್ಯಾಯವಾಗಿ  ನೀವು ಆರಿಸಿಕೊಳ್ಳಬಹುದು. ಆದ್ರೆ ಅದು ಕೂಡಾ  ಮಿತಿಯಲ್ಲಿರುವುದು ಒಳ್ಳೆಯದು.

 9. ನಿಮ್ಮ ಆಹಾರದಲ್ಲಿ ಫೈಬರ್ ಅಂಶ ಹೆಚ್ಚಿರಲಿ
ಫೈಬರ್​ಯುಕ್ತ ಆಹಾರ ಸೇವನೆಯು ನಿಮ್ಮ ಆರೋಗ್ಯದ ಮೇಲೆ ಮಹತ್ತರವಾದ ಪ್ರಭಾವ ಬೀರಬಹುದು. ಇದು ತೂಕ ನಷ್ಟ,  ಸುಲಭವಾದ ಜೀರ್ಣಕ್ರಿಯೆ, ಆರೋಗ್ಯಕರ ಕರುಳನ್ನ ಹೊಂದಲು ಸಕಾಯ ಮಾಡುತ್ತದೆ. ಜೊತೆಗೆ  ಶುಗರ್​ ಖಾಯಿಲೆಯನ್ನ ನಿಯಂತ್ರಣದಲ್ಲಿರಿಸುತ್ತದೆ. ಅದಕ್ಕಾಗಿ ನಿಮ್ಮ ಆಹಾರಲ್ಲಿ ತಾಜಾ ಹಣ್ಣುಗಳು ಮತ್ತು ಹಸಿರು ಎಲೆಗಳ ತರಕಾರಿಗಳನ್ನ ಹೆಚ್ಚಾಗಿ ಸೇವಿಸಿ. 

10. ಆರೋಗ್ಯಕರ ತೂಕ: ಎತ್ತರ, ವಯಸ್ಸಿಗೆ ತಕ್ಕಂತೆ ನಿಮ್ಮ ದೇಹದ ತೂಕ ಇರಬೇಕು. ಸ್ಟಲ್ಪ ಹೆಚ್ಚಿದ್ದರೂ ಒಬೆಸಿಟಿ ಸಮಸ್ಯೆ ಕಾಡಲಾರಂಭಿಸುತ್ತದೆ. ತೂಕವನ್ನ ಮ್ಯಾನೆಜ್​ ಮಾಡುವುದರಿಂದ, ಶುಗರ್​, ಬಿಪಿ, ಹೃದಯದ ಕಾಯಿಲೆಗಳಂತಹ ಹಲವಾರು ಆರೋಗ್ಯ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು  ಸಹಾಯ ಮಾಡುತ್ತದೆ.  ನಿಯಮಿತ ವ್ಯಾಯಾಮ, ಡಯೆಟ್​ ಮಾಡುವ ಮೂಲಕ ತೂಕವನ್ನ ನಿರ್ವಹಣೆ ಮಾಡಿಕೊಳ್ಳುವುದು ತುಂಬಾ ಮುಖ್ಯ.
ವಿಶೇಷ ಬರಹ: ಶ್ರುತಿ. ಆರ್​