ಇಂಡೋನೇಷ್ಯಾ ಸುನಾಮಿ: ಸಾವಿನ ಸಂಖ್ಯೆ 1234ಕ್ಕೆ ಏರಿಕೆ..!

ಪಾಲು: ಒಂದು ಕಡೆ ವೀ ನೀಡ್​ ಫುಡ್​​, ವೀ ನೀಡ್​ ಹೆಲ್ಪ್​​ ಎನ್ನುವ ಬೋರ್ಡ್​ಗಳು. ಇನ್ನೊಂದು ಕಡೆ ಓಣಿಗಳಲ್ಲಿ ಭಿಕ್ಷೆ ಬೇಡುತ್ತಿರುವ ಮಕ್ಕಳು, ಆಹಾರ ಹಾಗೂ ಕುಡಿಯುವ ನೀರಿಗಾಗಿ ಮುಗಿಲು ಮುಟ್ಟಿರುವ ಆಕ್ರಂದನ. ಪೆಟ್ರೋಲ್​ಗಾಗಿ ಬಂಕ್​ನ ಮುಂದೆ ಸಾಲುಗಟ್ಟಿದ ಜನರು ಇದು ಯಾವುದೋ ಸಿನಿಮಾದ ದೃಶ್ಯವಲ್ಲ. ಭೀಕರ ಭೂಕಂಪ ಹಾಗೂ ಸುನಾಮಿಗೆ ತುತ್ತಾಗಿರುವ ಇಂಡೋನೇಷ್ಯಾದ ದೃಶ್ಯಗಳಿವು. ಹೌದು ಇಂಡೋನೇಷ್ಯಾ ಭೀಕರ ಭೂಕಂಪ ಹಾಗೂ ಸುನಾಮಿಗೆ ಅಕ್ಷರಶಃ ನಲುಗಿ ಹೋಗಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಸಾವಿನ ಸಂಖ್ಯೆ ಈಗ 1,234ಕ್ಕೆ ತಲುಪಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 7.5ರಷ್ಟು ದಾಖಲಾಗಿದ್ದು, ಕಾಲನ ಆಟಕ್ಕೆ ಸಿಲುಕಿರುವ ಇಂಡೋನೇಷ್ಯಾದ ಜನರಿಗೆ ಮತ್ತಷ್ಟು ಸಾವು-ನೋವು ಸಂಭವಿಸುವ ಭಯ ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಉಭಯ ಪ್ರವಾಹಕ್ಕೆ 50000 ಜನ ನೆಲೆ ಕಳೆದುಕೊಂಡಿದ್ದಾರೆ. ಸುಮಾರು 3000 ಜನ ಪಾಲು ವಿಮಾನ ನಿಲ್ದಾಣದಲ್ಲಿ ಉಳಿದುಕೊಂಡಿದ್ದಾರೆ. ವಿಮಾನ ಸಂಚಾರ ಆರಂಭಿಸಲು ಪ್ರಯತ್ನಿಸಲಾಗುತ್ತಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಆಹಾರ ಹಾಗೂ ಇನ್ನಿತರೆ ಮೂಲಭೂತ ಸೌಲಭ್ಯಗಳನ್ನು ಸಾಗಿಸಲಾಗುತ್ತಿಲ್ಲ. ಸುಲವೇಶಿ ಪ್ರದೇಶಕ್ಕೆ ನಾಲ್ಕನೇ ದಿನವೂ ಸಹ ಆಹಾರ ಸಾಗಿಸಲಾಗಿಲ್ಲ. ಅಲ್ಲಿಯ ರಸ್ತೆಗಳ ಅಕ್ಕಪಕ್ಕದಲ್ಲಿ ವೀ ನೀಡ್​ ಫುಡ್​​, ವೀ ನೀಡ್​ ಹೆಲ್ಪ್​​ ಎಂದು ಬೋರ್ಡ್​ಗಳು ಕಾಣುತ್ತಿವೆ. ಅಲ್ಲದೇ ಅಲ್ಲಿಯ ಮಕ್ಕಳು ಓಣಿಗಳಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ನಾವು ಮೂರು ದಿನದಿಂದ ಊಟ ಮಾಡಿಲ್ಲ. ನಮ್ಮನ್ನು ರಕ್ಷಿಸಿ ಎನ್ನುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv