ಆಪರೇಷನ್ ಮಾಡಿದ ಡಾಕ್ಟರ್, ಫೋರ್ಸೆಪ್ಸ್ ಮರೆತುಬಿಟ್ರು..!

ಹೈದ್ರಾಬಾದ್​: ವೈದ್ಯರ ನಿರ್ಲಕ್ಷ್ಯದಿಂದ ಅದೆಷ್ಟೋ ರೋಗಿಗಳು ಪರದಾಡಿರುವ ಹಲವು ಉದಾಹರಣೆ ನಮ್ಮೆದುರಿಗೆ ಇವೆ. ಆದ್ರೂ, ಇನ್ನೂ ಕೆಲವು ವೈದ್ಯರು ಮಾತ್ರ ಇಂಥ ನಿರ್ಲಕ್ಷ್ಯ ಧೋರಣೆಯನ್ನ ಸರಿ ಮಾಡಿಕೊಳ್ಳಲು ಮುಂದಾಗುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ, ತೆಲಂಗಾಣ ರಾಜಧಾನಿ ಹೈದ್ರಾಬಾದ್​​ನಲ್ಲಿ ನಡೆದ ಘಟನೆ.
ಶಸ್ತ್ರ ಚಿಕಿತ್ಸೆಗೆ ಅಂತ ಬಂದ ರೋಗಿಗಳ ದೇಹದಲ್ಲಿ ಯಾವುದಾದ್ರೂ ವಸ್ತುಗಳನ್ನ ಮರೆತು, ಅದು ರೋಗಿಗಳ ಪಾಲಿಕೆ ಕಂಟಕವಾಗಿ ಪರಿಣಮಿಸಿದ ಘಟನೆಗಳು ಸಾಕಷ್ಟು ನಡೆದಿವೆ. ಇದೀಗ ಹೈದ್ರಾಬಾದ್​​ನ ನಿಜಾಮ್ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ನಿಮ್ಸ್)ನಲ್ಲಿ ನಡೆದಿದೆ. ಇಲ್ಲಿನ ಮಂಗಲ್ಹಾಟ್ ಪ್ರದೇಶದ 33 ವರ್ಷದ ಮಹೇಶ್ವರಿ ಚೌದರಿ ಅನ್ನೋರು 3 ತಿಂಗಳ ಹಿಂದೆ ನಿಮ್ಸ್​​ಗೆ ಬಂದಿದ್ದರು. ಹೊಟ್ಟೆ ನೋವು ಅಂತ ಬಂದಿದ್ದ ಮಹೇಶ್ವರಿಗೆ ಇಲ್ಲಿನ ವೈದ್ಯರು ಆಪರೇಷನ್ ಮಾಡಿದ್ದಾರೆ.
ಶಸ್ತ್ರ ಚಿಕಿತ್ಸೆ ನೆರವೇರಿಸಿದ ವೈದ್ಯರು, ಆಪರೇಷನ್​ಗೆ ಬಳಸಿದ್ದ ಫೋರ್​ಸೆಪ್ಸ್ ಅನ್ನ ಮಹೇಶ್ವರಿ ಅವರ ಹೊಟ್ಟೆಯಲ್ಲೇ ಮರೆತುಬಿಟ್ಟಿದ್ದಾರೆ. ನಾನೀಗ ಫುಲ್ ಆರಾಮ್ ಆಗಿದ್ದೀನಿ ಅಂತ ತಿಳಿದು, ಡಿಸ್ಚಾರ್ಜ್ ಆಗಿ ಮನೆಗೆ ಹೋದ ಮಹೇಶ್ವರಿಗೆ 3 ತಿಂಗಳಾದ್ರೂ, ಹೊಟ್ಟೆ ನೋವು ಮಾತ್ರ ಕಡಿಮೆಯಾಗಿಲ್ಲ. ಏನಿದು ಅಂತ ಮತ್ತೆ ಅದೇ ನಿಮ್ಸ್​​ಗೆ ಹೋಗಿದ್ದಾರೆ. ಅಲ್ಲಿ ಎಕ್ಸ್​​ರೇ ತೆಗೆದಾಗಲೇ ಗೊತ್ತಾಗಿದ್ದು ಡಾಕ್ಟರ್​ಗಳ ನೆಗ್ಲಿಜೆನ್ಸಿ.
ಮಹೇಶ್ವರಿಗೆ ಶಸ್ತ್ರ ಚಿಕಿತ್ಸೆ ಮಾಡಿದ ನಿಮ್ಸ್​​ನ ಸಿಬ್ಬಂದಿ ಫೋರ್​ಸೆಪ್ಸ್ ತೆಗೆಯೋದನ್ನ ಮರೆತಿದ್ದಾರೆ ಅನ್ನೋದು ಗೊತ್ತಾಗ್ತಿದ್ದಂತೆ, ಸಂಬಂಧಿಕರು ಆಸ್ಪತ್ರೆ ಎದುರಲ್ಲೇ ಧರಣಿ ಕೂತಿದ್ದರು. ಬೇಜವಾಬ್ದಾರಿ ತೋರಿದ, ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ರು. ಸದ್ಯ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಸಿಕ್ಕಿದ್ದು, ಪ್ರತಿಭಟನೆ ನಿಂತಿದೆ. ಆದ್ರೆ, ಜೀವ ಉಳಿಸಬೇಕಾದ ವೈದ್ಯರು, ಈ ರೀತಿ ಯಡವಟ್ಟುಗಳನ್ನ ಮಾಡಿ ಜೀವ ತೆಗೆಯೋ ಹಾಗಾದ್ರೆ, ನಾವು ಯಾರ ಬಳಿ ಹೋಗಬೇಕು ಅನ್ನೋದು ಬಡಪಾಯಿ ರೋಗಿಗಳ ಅಳಲು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv