ಪುರಾತನ ವಿಗ್ರಹಗಳೆಂದು ವಂಚಿಸುತ್ತಿದ್ದ ಮೂವರು ಅಂದರ್

ಹುಬ್ಬಳ್ಳಿ: ಪುರಾತನ ಮೂರ್ತಿಗಳು ಅಂತಾ ಲೋಹದ ಮೂರ್ತಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹಳೇ ಹುಬ್ಬಳ್ಳಿಯ ಮೊರಾರ್ಜಿ ನಗರದಲ್ಲಿ ಆಟೋ ರಿಕ್ಷಾದಲ್ಲಿ ಇವು ಪುರಾತನ ಮೂರ್ತಿಗಳು ಅಂತಾ 2 ಲೋಹದ ಮೂರ್ತಿಗಳನ್ನು ಇಟ್ಕೊಂಡು, ಇವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಐಶ್ವರ್ಯ ವೃದ್ಧಿಯಾಗುವುದು ಅಂತಾ ಹೇಳಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿದ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊರಾರ್ಜಿ ದೇಸಾಯಿ ನಗರದ ನಿವಾಸಿಗಳಾದ ನಿರುಪಾದಿ ಸಮಳಾಪೂರ, ಕುಂದಗೋಳದ ಹೈದರ ಅಲಿ ಭಾವಿಕಟ್ಟಿ ಮತ್ತು ರಸೂಲ್​ಮಿಯಾ ಮುಲ್ಲಾರನ್ನು ಬಂಧಿಸಿ ಎರಡು ಮೂರ್ತಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಮೂವರ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 118/2018 ಕಲಂ.420, 379 R/W 34 IPC & 41(d) R/W 102 Crpc ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.