ಪತ್ನಿ ಮನೆ ಬಿಟ್ಟು ಹೋದಳು, ಪಾರ್ಶ್ವವಾಯು ಪೀಡಿತ ತಂದೆಗೀಗ ಮಗಳೇ ಅಮ್ಮ..!

ಬೀಜಿಂಗ್: ತಂದೆ, ತಾಯಿ ಮಕ್ಕಳ ಲಾಲನೆ ಪಾಲನೆ ಮಾಡುತ್ತಾ, ದೊಡ್ಡವರನ್ನಾಗಿ ಮಾಡ್ತಾರೆ. ಅದೇ ಕಡೆಗಾಲದಲ್ಲಿ ತಂದೆ ತಾಯಿಯನ್ನ ನೋಡಕೊಳ್ಳೋಕೆ ಕೆಲವರು ಹಿಂದೇಟು ಹಾಕ್ತಾರೆ, ವೃದ್ಧಾಶ್ರಮಕ್ಕೆ ಸೇರಿಸಿ ಸುಮ್ಮನಾಗಿಬಿಡ್ತಾರೆ. ಆದ್ರೆ ಈ ಪುಟ್ಟ ಪೋರಿ ಮಾಡ್ತಿರೋ ಕೆಲಸ ಅಂತಹ ಜನರಿಗೆ ದೊಡ್ಡ ಪಾಠ.

ಚೀನಾದ ನಿಂಗ್ಸಿಯಾ ಪ್ರಾಂತ್ಯದಲ್ಲಿ ವಾಸವಾಗಿರೋ 6 ವರ್ಷದ ಬಾಲಕಿ ಜಿಯಾ, ಪಾರ್ಶ್ವವಾಯುಪೀಡಿತ ತಂದೆಯ ಆರೈಕೆ ಮಾಡುತ್ತಾ ಎಲ್ಲರಿಗೂ ಮಾದರಿಯಾಗಿದ್ದಾಳೆ. ಮನೆಯಲ್ಲಿ ತಾಯಿ ಇಲ್ಲ, ತಂದೆ ಟಿಯಾನ್​​​ಗೆ ಕೆಲಸ ಮಾಡೋಕಾಗಲ್ಲ. ಹೀಗಾಗಿ ಜಿಯಾ ಶಾಲೆ ಹಾಗೂ ಮನೆಕೆಲಸಗಳ ಜೊತೆಜೊತೆಗೆ ತನ್ನ ತಂದೆಯನ್ನೂ ನೋಡಿಕೊಳ್ಳುತ್ತಿದ್ದಾಳೆ. ಜಿಯಾಗೆ ಆಕೆಯ ಅಜ್ಜಿ ತಾತ ಸಹಾಯ ಮಾಡುತ್ತಿದ್ದಾರೆ.

ಈ ಬಗ್ಗೆ ಚೀನಾದ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಜಿಯಾ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಎದ್ದು, ಒಂದು ಗಂಟೆ ಕಾಲ ತನ್ನ ತಂದೆಗೆ ಮಸಾಜ್ ಮಾಡುತ್ತಾಳೆ. ಬಳಿಕ ಅವರ ಹಲ್ಲು ಉಜ್ಜಿ, ಮುಖ ತೊಳೆದು, ನಂತರ ತಾನು ರೆಡಿಯಾಗಿ ಶಾಲೆಗೆ ಹೋಗುತ್ತಾಳೆ. ಮನೆಗೆ ಬಂದ ನಂತರ ಜಿಯಾ ತನ್ನ ತಂದೆಗೆ ಊಟ ಮಾಡಿಸಿ ಮನೆಯಲ್ಲೇ ವೀಲ್​ಚೇರ್​ನಲ್ಲಿ ಓಡಾಡಿಸುತ್ತಾಳೆ. ಹೀಗೆ ಪುಟ್ಟ ಬಾಲಕಿ ತನ್ನ ತಂದೆಯ ಪಾಲನೆಯ ಜವಾಬ್ದಾರಿಯನ್ನ ಹೊತ್ತಿದ್ದರೂ ಆಕೆಗೆ ಇದ್ಯಾವುದೀ ಹೊರೆ ಎನಿಸುವುದಿಲ್ಲವಂತೆ. ನನ್ನ ಅಪ್ಪನನ್ನು ನೋಡಿಕೊಳ್ಳೋದ್ರಿಂದ ನನಗೆ ಸುಸ್ತಾಗೋದೇ ಇಲ್ಲ ಅಂತಾಳೆ ಜಿಯಾ.

ಜಿಯಾ ತಂದೆ ಟಿಯಾನ್​​​ ಹೈಚೆಂಗ್​​​​ 2016ರ ಮಾರ್ಚ್​​​ನಲ್ಲಿ ಅಪಘಾತಕ್ಕೀಡಾಗಿ ಪಾಶ್ವ ವಾಯುವಿಗೆ ತುತ್ತಾಗಿದ್ದರು. ಬಳಿಕ ಅವರ ಹೆಂಡತಿ, ಗಂಡ ಟಿಯಾನ್ ಹಾಗೂ ಮಗಳು ಜಿಯಾ ಜಿಯಾಳನ್ನು ಬಿಟ್ಟು ತನ್ನ ಹಿರಿಯ ಮಗನನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದಳು. ಕೆಲವು ದಿನ ತಾಯಿಯ ಮನೆಯಲ್ಲಿ ಇದ್ದು ಬರ್ತೀನಿ ಎಂದು ಹೋದ ಹೆಂಡತಿ, ಹಿಂದಿರುಗಲೇ ಇಲ್ಲ, ಹಾಗೇ ಡಿವೋರ್ಸ್​​​ ಫೈಲ್ ಮಾಡಿದ್ದಾಳೆ ಎಂದು ಟಿಯಾನ್​​ ಹೇಳಿದ್ದಾರೆ.

ಟಿಯಾನ್ ಅವರು ಕುಟುಂಬ ನಿರ್ವಹಣೆಗಾಗಿ ಹಣ ಸಂಗ್ರಹಿಸಲು, ಚೀನಾದ ಲೈವ್​ ಸ್ಟ್ರೀಮಿಂಗ್​ ಅಪ್ಲಿಕೇಷನ್​​ ಕುವಾಶೋನಲ್ಲಿ ಅಕೌಂಟ್​​ ತೆರೆದಿದ್ದರು. ಈ ಅಕೌಂಟ್​​ನಲ್ಲಿ ಜಿಯಾ ತನ್ನ ತಂದೆಯ ಆರೈಕೆ ಮಾಡೋ ವಿಡಿಯೋಗಳಿದ್ದು, 4,80,000ಕ್ಕೂ ಹೆಚ್ಚು ಫಾಲೋವರ್ಸ್​ ಇದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv