‘ಮಳೆಗಾಲದಲ್ಲಿ ಅಣಬೆಗಳಂತೆ ತೃತೀಯ ರಂಗದ ಪಕ್ಷಗಳು ಕಾಣಿಸಿಕೊಳ್ಳುತ್ತಿವೆ’

ಬಳ್ಳಾರಿ: ಮಳೆಗಾಲದಲ್ಲಿ ಅಣಬೆ ಹುಟ್ಟುವಂತೆ ತೃತೀಯ ರಂಗದ ಪಕ್ಷಗಳು ಕಾಣಿಸಿಕೊಳ್ಳುತ್ತಿವೆ ಅಂತಾ ಮೊಣಕಾಲ್ಮೂರು ಬಿಜೆಪಿ ಶಾಸಕ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ತೃತೀಯ ರಂಗಕ್ಕೆ ಯಾವುದೇ ಅಸ್ತಿತ್ವ ಇಲ್ಲ. ತೃತೀಯ ರಂಗದಲ್ಲಿ ಕಾಂಗ್ರೆಸ್ ಇರುತ್ತೆ ಅಂತ ಮಮತಾ ಬ್ಯಾನರ್ಜಿ ಹೇಳಿಲ್ಲ. ತೃತೀಯ ರಂಗಕ್ಕೆ ಹಿಂದಿನಿಂದಲೂ ಕಾಂಗ್ರೆಸ್ ವಿರೋಧಿಯಾಗಿದೆ ಎಂದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಸ್ವಾರ್ಥದ ರಾಜಕಾರಣ ಮಾಡುತ್ತಿವೆ. ನಿನ್ನೆ ನಡೆದ ಪ್ರಮಾಣವಚನ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದ ಪತನಕ್ಕೆ ದಿಕ್ಸೂಚಿ ಎಂದು ಹೇಳಿದ್ರು. ಸಂಪೂರ್ಣ ಸಾಲ ಮನ್ನಾ ವಿಚಾರದ ಕುರಿತು ಕುಮಾರಸ್ವಾಮಿ ಯೂ ಟರ್ನ್ ಹೊಡೆದಿದ್ದಾರೆ. ಬಹುಮತ ಬಂದರಷ್ಟೇ ಮನ್ನಾ ಮಾಡ್ತೇನೆ ಎಂದು ಹೇಳಿ ಕುಮಾರಸ್ವಾಮಿ ಬದ್ಧತೆಯನ್ನು ಮಾರಿಕೊಂಡಿದ್ದಾರೆ. ಬಹುಮತ ಇಲ್ಲದಿದ್ದರೆ ಕುಮಾರಸ್ವಾಮಿ ರಾಜೀನಾಮೆ ನೀಡಲಿ. ಸಾಲ ಮನ್ನಾ ಮಾಡಲು ಆಗದಿದ್ರೆ ಕುರ್ಚಿ ಬಿಟ್ಟು ಹೋಗಿ ಎಂದು ವಾಗ್ದಾಳಿ ನಡೆಸಿದರು.
‘ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಾಲಾಗಲಿಲ್ಲ ಎಂಬ ನೋವಿದೆ’
ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಾಲಾಗಲಿಲ್ಲ ಎಂಬ ನೋವಿದೆ. ವಿರೋಧ ಪಕ್ಷದ ಸ್ಥಾನದಲ್ಲಿ ದ್ದುಕೊಂಡು ಸರ್ಕಾರವನ್ನು ನಿದ್ದೆ ಮಾಡಲು ಬಿಡಲ್ಲ. ಸದ್ಯ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಸಂಸದ ಸ್ಥಾನಕ್ಕೆ ಉಪಚುನಾವಣೆ ಸ್ಪರ್ಧೆಯ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ ಎಂದರು. ನಮ್ಮ ಸರ್ಕಾರ ಬಂದಿದ್ದರೆ ರೈತರ ಎಲ್ಲಾ ಬಗೆಯ ಸಾಲಗಳನ್ನು ಮನ್ನಾ ಮಾಡುತ್ತಿದ್ದೆವು ಎಂದು ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv