‘ಪ್ರತ್ಯೇಕ ಧರ್ಮದ ಶಿಫಾರಸ್ ವಾಪಸ್: ಕೇಂದ್ರದ ರಾಜಕೀಯ ಅಡಗಿದೆ’

ಧಾರವಾಡ: ಲಿಂಗಾಯತ ಪ್ರತ್ಯೇಕ ಧರ್ಮದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ವಾಪಸ್ಸು ಕಳಿಸಿದ್ದರ ಹಿಂದೆ ಕೇಂದ್ರ ಸರ್ಕಾರದ ರಾಜಕೀಯ ಅಡಗಿದೆ. ಶಿಫಾರಸ್ಸನ್ನು ಪುರಸ್ಕರಿಸಬೇಕಿತ್ತು ಅಥವಾ ತಿರಸ್ಕರಿಸಬೇಕಿತ್ತು. ಅದನ್ನು ಬಿಟ್ಟು ವಾಪಸ್ ಕಳುಹಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಗಾರ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

‌ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಕುಮಾರಸ್ವಾಮಿ ನೇತೃತ್ವದ  ಸರ್ಕಾರಕ್ಕೆ ಮುಜುಗರ ಉಂಟುಮಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಲಿಂಗಾಯತ ಧರ್ಮದ ಶಿಫಾರಸ್ಸನ್ನು ವಾಪಸ್ ಕಳುಹಿಸಿರಬಹುದೆಂಬ ಅನುಮಾನ ಕಾಡುತ್ತಿದೆ. ರಾಜ್ಯ ಸರ್ಕಾರ ಕಳಿಸಿದ್ದ ಪ್ರಸ್ತಾವನೆಯನ್ನು ವಾಪಸ್ ಕಳಿಸಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಕೇಂದ್ರ ಸರ್ಕಾರ ಷಡ್ಯಂತ್ರ ಮಾಡಿದೆ ಎಂದು ಹೊರಟ್ಟಿ ಆರೋಪಿಸಿದ್ರು.‌
ನಾನು ಲಿಂಗಾಯತ ಧರ್ಮದಲ್ಲಿ ವೈಯಕ್ತಿಕವಾಗಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಎಲ್ಲ ನಿರ್ಧಾರವನ್ನೂ ಸಮಿತಿ ತೆಗೆದುಕೊಳ್ಳುತ್ತದೆ. ಆದರೆ, ರಾಜ್ಯ ಸರ್ಕಾರ ಯಾವ ರೀತಿ ತೀರ್ಮಾನ ಕೈಗೊಳ್ಳುವುದು ಎಂದು ಕಾಯ್ದು ನೋಡಲಾಗುವುದು. ನಂತರ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಸಭೆ ನಡೆಸಿ ರಾಜ್ಯ ಸರ್ಕಾರಕ್ಕೆ ನಮ್ಮ ಅಭಿಪ್ರಾಯ ತಿಳಿಸಲಾಗುವುದು. ಸದ್ಯಕ್ಕೆ ಶಿಫಾರಸ್ಸನ್ನು ಕೇಂದ್ರ ಸರ್ಕಾರ ವಾಪಸ್ ​ಕಳುಹಿಸಿರುವ ಕುರಿತು ಸಂಪೂರ್ಣ ಮಾಹಿತಿ ಇಲ್ಲ. ಅಲ್ಲದೆ‌, ರಾಜ್ಯ ಸರ್ಕಾರಕ್ಕೆ ಯಾವ ರೀತಿ ಸ್ಪಷ್ಟಣೆ ಕೇಳಿ ವಾಪಸ್ ಕಳುಹಿಸಿದೆ ಎಂಬುದೂ ತಿಳಿದಿಲ್ಲ. ಸಂಪೂರ್ಣ ಮಾಹಿತಿ ಬಂದ ನಂತರ ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡರ ಸಭೆ ಮಾಡಲಾಗುವುದು ಎಂದು ಹೊರಟ್ಟಿ ತಿಳಿಸಿದ್ರು. ಲಿಂಗಾಯತರು ಹಾಗೂ ವೀರಶೈವರು ಒಟ್ಟಿಗೆ ಹೋಗುವುದಾದ್ರೆ ಸ್ವಾಗತ. ಈ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡರು ಸೇರಿ ಚರ್ಚೆ ನಡೆಸಿ, ತೀರ್ಮಾನ ಕೈಗೊಂಡರೆ ಅದಕ್ಕೆ ನನ್ನ ತಕರಾರು ಇಲ್ಲ ಅಂತಾನೂ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಸ್ಪಷ್ಟಪಡಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv