ರೈತರ ಸಾಲ ಮನ್ನಾ ಮಾಡೋದ್ರಲ್ಲಿ ಎರಡನೇ ಮಾತಿಲ್ಲ-ಡಾ. ಪರಮೇಶ್ವರ್

ತುಮಕೂರು: ರೈತರ ಸಾಲ ಮನ್ನಾ ಮಾಡೋದರಲ್ಲಿ ಎರಡು ಮಾತಿಲ್ಲ. ನಮ್ಮದು ಮೈತ್ರಿ ಸರ್ಕಾರ, ರೈತರು ಬೇರೆ ಬೇರೆ ರೀತಿಯ ಸಾಲ ಮಾಡಿಕೊಂಡಿದ್ದಾರೆ. ಅದರಲ್ಲಿ ಯಾವ ಸಾಲ ಮನ್ನಾ ಮಾಡಬೇಕು. ಯಾವ ರೀತಿಯ ಸಾಲ ಮನ್ನಾ ಮಾಡಿದರೆ ಅವರ ಬದುಕಿಗೆ ಸಹಾಯ ಆಗುತ್ತೆ ಅದನ್ನು ಗುರುತಿಸಿ ಮನ್ನಾ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದ್ದಾರೆ. ಕೊರಟಗೆರೆಯಲ್ಲಿ ಈ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ರೈತರು ಮಾಡಿರುವ ಎಲ್ಲಾ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ. ಆದರೆ, ರೈತರ ಬದುಕಿಗೆ ಸಹಾಯವಾಗಬಲ್ಲ ಸಾಲ ಮನ್ನಾ ಮಾಡುತ್ತೇವೆ ಅಂತಾ ಪುನರುಚ್ಚರಿಸಿದ್ದಾರೆ.

ನಮ್ಮ ಮೈತ್ರಿ ಸರ್ಕಾರದಲ್ಲಿ ಗೊಂದಲವಿಲ್ಲ
ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಹಾಯವಾಗಬಲ್ಲ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇವೆ. ಮೈತ್ರಿ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಒಬ್ಬರಿಗೆ ಒಂದೇ ಹುದ್ದೆ ನಿಯಮದನ್ವಯ ಕೆಪಿಸಿಸಿ ಅಧ್ಯಕ್ಷರಾಗಿ ನಾನು ಮುಂದುವರಿಯುವುದಿಲ್ಲ. ಖಾತೆ ಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ. ಅದು ಮುಗಿದ ತಕ್ಷಣವೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಅದಲ್ಲದೆ ರಾಜ್ಯ ರಾಜಕೀಯದ ಎಲ್ಲ ಬೆಳವಣಿಗೆಗಳನ್ನು ಗಮನಿಸಿ ವರಿಷ್ಠರು ತೀರ್ಮಾನ ಮಾಡುತ್ತಾರೆ ಅಂತಾ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಕೊರಟಗೆರೆಯಲ್ಲಿ ಮತದಾರರಿಗೆ ಕೃತಜ್ಞತಾ ಸಮಾರಂಭ
ಕೊರಟಗೆರೆಯಲ್ಲಿ ಡಿಸಿಎಂ‌ ಪರಮೇಶ್ವರ್ ಕೃತಜ್ಞತಾ ಸಮಾರಂಭ ಆಯೋಜಿಸಿದ್ದರು. ಚುನಾವಣೆಯಲ್ಲಿ ಗೆಲ್ಲಿಸಿದ್ದಕ್ಕೆ ಮರದಾರರಿಗೆ ಕೃತಜ್ಞತೆ ಅರ್ಪಿಸಲು ತೆರೆದ ವಾಹನದಲ್ಲಿ ಸಂಚರಿಸಿದರು. ಈ ಬಾರಿಯ ಗೆಲುವಿನಿಂದ ನಾನು ಡಿಸಿಎಂ ಪಟ್ಟ ಅಲಂಕರಿಸುವಂತಾಯಿತು ಎಂದು ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಬಂದ ಪರಮೇಶ್ವರ್ ಹೇಳಿದರು. ಕಾರ್ಯಕರ್ತರು ಡಾ. ಜಿ. ಪರಮೇಶ್ವರ್​ಗೆ ಅದ್ಧೂರಿ ಸ್ವಾಗತ ಕೋರಿದ್ದು ವಿಶೇಷವಾಗಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv