ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ: ಸಚಿವ ಎನ್​ ಮಹೇಶ್​​

ಕಲಬುರ್ಗಿ: ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ಕಡಿಮೆ ವಿದ್ಯಾರ್ಥಿಗಳಿದ್ದರೂ ಶಾಲೆಗಳು ಮುಂದುವರಿಯಲಿವೆ ಅಂತಾ ಶಿಕ್ಷಣ ಸಚಿವ ಎನ್​. ಮಹೇಶ್​ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬದಲಿಗೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತೇವೆ. ಎಲ್​​​​ಕೆಜಿಯನ್ನು ಕೂಡ ಸರ್ಕಾರಿ ಶಾಲೆಯಲ್ಲಿ ಜಾರಿಗೆ ತರುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.

ಪ್ರಥಮ ಹಂತವಾಗಿ ಸಾವಿರ ಶಾಲೆಗಳಲ್ಲಿ ಎಲ್​​​​ಕೆಜಿ, ಯುಕೆಜಿ ಆರಂಭಕ್ಕೆ ಚಿಂತನೆ ನಡೆಸಿದ್ದೇವೆ. ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಅನ್ನು ಒಂದು ಭಾಷೆಯನ್ನಾಗಿ ಕಲಿಸುವ ಚಿಂತನೆಯನ್ನು ಸಹ ಹೊಂದಿದ್ದೇವೆ ಎಂದು ಸಚಿವರು ತಿಳಿಸಿದರು. ಇಡೀ ಇಲಾಖೆ ವಿದ್ಯಾರ್ಥಿ ಕೇಂದ್ರಿತವಾಗಬೇಕು. ಗುಣಮಟ್ಟದ ಶಿಕ್ಷಣ ಹಾಗೂ ಕ್ರಿಯಾತ್ಮಕ ಮತ್ತು ಕೌಶಲ್ಯದಾಯಕ ಶಿಕ್ಷಣ ಸಿಗುವ ವ್ಯವಸ್ಥೆ ಆಗಬೇಕು ಹೀಗಾದಾಗ ಮಾತ್ರ ಸರ್ಕಾರಿ ಶಾಲೆಗಳಲ್ಲಿ ಬದಲಾವಣೆ ತರಬಹುದು ಎಂದು ಸಚಿವರು ಅಭಿಪ್ರಾಯಪಟ್ಟರು. ಜಾಗತಿಕ ಯುಗದಲ್ಲಿ ಖಾಸಗಿ ವಲಯ ವಿಸ್ತಾರವಾಗುತ್ತಿದೆ. ಅದಕ್ಕೆ ಪೂರಕವಾದ ಶಿಕ್ಷಣ ವ್ಯವಸ್ಥೆಯನ್ನು ನಮ್ಮ ಇಲಾಖೆಯಿಂದ ಮಾಡುತ್ತಿದ್ದೇವೆ ಎಂದರು. ಇನ್ನು ಶಿಕ್ಷಕರ ಕೊರತೆಯ ಕುರಿತು ಪ್ರತಿಕ್ರಿಯಿಸಿದ ಅವರು, ಶಿಕ್ಷಕರ ಕೊರತೆ ಹಿನ್ನೆಲೆ ಈಗಾಗಲೇ 10 ಸಾವಿರ ಪ್ರಾಥಮಿಕ ಶಾಲೆ ಶಿಕ್ಷಕರ ನೇಮಕ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv