ಆ ಮನೆಯಲ್ಲಿ ಮಹಾತ್ಮ ಗಾಂಧಿಯ ಸ್ಮರಿಸದ ದಿನವೇ ಇಲ್ಲ..!

ಕಾರವಾರ: ಪ್ರತಿ ವರ್ಷ ಅಕ್ಟೋಬರ್ 2ರಂದು ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. ಆದರೆ ವರ್ಷ ಪೂರ್ತಿ ಗಾಂಧಿ ತಾತನನ್ನು ಸ್ಮರಿಸುವ ಕುಟುಂಬವೊಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿದೆ. ಈ ಮನೆಯವರೆಲ್ಲರೂ ಸೇರಿ ನಿತ್ಯ ಮಹಾತ್ಮ ಗಾಂಧೀಜಿಯವರಿಗೆ ಪೂಜೆ ಸಲ್ಲಿಸುತ್ತಾರೆ. ದೇಶಾಭಿಮಾನವನ್ನು ಮರೆಯುತ್ತಿರುವ ಸಮಕಾಲೀನ ಸಂದರ್ಭದಲ್ಲಿ, ಇಲ್ಲಿ ಮಾತ್ರ ನಿತ್ಯ ಗಾಂಧಿಯನ್ನು ಸ್ಮರಿಸಿ ದೇಶಾಭಿಮಾನ ಮೆರೆಯುತ್ತಿದ್ದಾರೆ.

ಲಕ್ಷ್ಮೇಶ್ವರ ಲಿಂಗು ಆಗೇರ ಹಾಗೂ ಥಾಕು ಆಗೇರ ಸಹೋದರರ ಮನೆಯಲ್ಲಿ ಮಹಾತ್ಮ ಗಾಂಧೀಜಿಯವರಿಗೆ ನಿತ್ಯ ಪೂಜೆ ಸಲ್ಲಿಸುತ್ತಾರೆ.

ಮಹಾತ್ಮ ಗಾಂಧೀಜಿಯವರು 1942 ರಲ್ಲಿ ಅಂಕೋಲಾಗೆ ಬಂದ ಸಂದರ್ಭದಲ್ಲಿ ಅವರ ತ್ಯಾಗ ಮತ್ತು ಆದರ್ಶ ಗುಣಗಳಿಂದ ಸಾವಿರಾರು ಜನ ಪ್ರೇರಿತರಾಗಿದ್ದರು. ಸ್ವಾತಂತ್ರ್ಯ ಹೋರಾಟದ ಗಂಡು ಮೆಟ್ಟಿನ ನೆಲವಾದ ಈ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಗಾಂಧೀಜಿಯನ್ನು ಕೊಂಡಾಡುತ್ತಾರೆ.

ಮನೆಯ ಎದುರು ವಿಶೇಷವಾಗಿ ಗಾಂಧಿಜಿಯವರ ಕಟ್ಟೆ ನಿರ್ಮಿಸಿದ್ದಾರೆ. ಹೀಗೆ ಕಳೆದ ಐದು ದಶಕದಿಂದ ತಮ್ಮ ಮನೆಯ ದೇವರೊಡನೆ ಗಾಂಧೀಜಿಯವರಿಗೂ ಪೂಜೆ ಸಲ್ಲಿಸುತ್ತ ಬರುತ್ತಿದ್ದಾರೆ. ಪ್ರತಿ ನಿತ್ಯ ಬೆಳಿಗ್ಗೆ ಗಂಧದ ಕಡ್ಡಿ ಹಚ್ಚಿ, ಆರತಿ ಬೆಳಗಿ ಪೂಜೆ ಸಲ್ಲಿಸುತ್ತಾರೆ.

1931 ರಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಈ ಕುಟುಂಬದ ಬಲಿಯಾ ಮಾಧು ಆಗೇರ ಎಂಬುವವರು ಸ್ವತಃ ಬಳಪದ ಕಲ್ಲಿನಲ್ಲಿ, ಗಾಂಧೀಜಿಯವರ ಉಬ್ಬು ಶಿಲ್ಪ ನಿರ್ಮಿಸಿದ್ದರಂತೆ. 1957 ರಲ್ಲಿ ತಮ್ಮ ಮನೆಯ ಅಂಗಳದಲ್ಲಿ ಕಟ್ಟೆ ನಿರ್ಮಿಸಿ ಗಾಂಧಿಜೀಯವರಿಗೆ ಸ್ಥಾನ ಒದಗಿಸಿ, ನಿತ್ಯ ಪೂಜೆಯ ಪರಿಪಾಟ ಮುಂದುವರಿಸಿದರಂತೆ. ಈಗ ಅವರ ಮಕ್ಕಳು, ಮೊಮ್ಮಕ್ಕಳು ನಿತ್ಯ ಪೂಜೆ ಮುಂದುವರೆಸಿಕೊಂಡು ಬಂದಿದ್ದಾರೆ.

ಸರಕಾರ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾಗುವ ಸವಲತ್ತುಗಳನ್ನು ಬಲಿಯಾ ಆಗೇರರಿಗೆ ನೀಡಲು ಮುಂದಾಗಿತ್ತು. ಆದರೆ ಸರಕಾರದ ಯಾವುದೇ ಸೌಲಭ್ಯವನ್ನು ಪಡೆಯಲು ಬಲಿಯಾ ಆಗೇರ ನಿರಾಕರಿಸಿದರಂತೆ. ಕಟ್ಟಾ ಗಾಂಧಿವಾದಿಯಾಗಿದ್ದ ಬಲಿಯಾ ಲಕ್ಷ್ಮೇಶ್ವರ ಅವರು 1981 ರಲ್ಲಿ ನಿಧನರಾದ ನಂತರ ಅವರ ಮಕ್ಕಳು-ಮೊಮ್ಮಕ್ಕಳು ಗಾಂಧೀಜಿಯವರ ಪ್ರತಿಮೆಗೆ ಪೂಜೆ ಸಲ್ಲಿಸುತ್ತ ಬಂದಿದ್ದಾರೆ.

ಅದರಲ್ಲೂ ಕೆಲಸ-ಕಾರ್ಯದ ನಿಮಿತ್ತ ಹೊರ ಊರಿನಲ್ಲಿರುವ ಈ ದಲಿತ ಕುಟುಂಬದ ಪ್ರತಿಯೊಬ್ಬರು ಗಾಂಧಿ ಜಯಂತಿಯಂದು ಉಪಸ್ಥಿತರಿದ್ದು ಹಬ್ಬದ ವಾತಾವರಣ ನಿರ್ಮಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.

ಕರ ನಿರಾಕರಣೆ, ಉಪ್ಪಿನ ಸತ್ಯಾಗ್ರಹ ಹಾಗೂ ಚಲೇಜಾವ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಹೋರಾಟದ ಕಿಚ್ಚನ್ನು ಜೀವಂತವಾಗಿರಿಸಿದ ಅಂಕೋಲಾದ ಜನತೆ ಮಹಾತ್ಮನನ್ನು ತಮ್ಮ ಹೃದಯದಲ್ಲಿ ತುಂಬಿಕೊಂಡಿದ್ದಾರೆ. ಗಾಂಧೀಜಿಯವರು ನಮ್ಮನ್ನಗಲಿ ಇಂದಿಗೆ 6 ದಶಕ ಕಳೆದರೂ ಇಂದಿಗೂ ಗಾಂಧಿಯನ್ನು ಸ್ಮರಿಸುತ್ತಿರುವುದು ಇಲ್ಲಿನ ಜನತೆಯಲ್ಲಿ ಇರುವ ದೇಶಾಭಿಮಾನದ ಪ್ರತೀಕವಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv