ಗೃಹಸಚಿವರ ಏರಿಯಾದಲ್ಲಿ ಇಲ್ಲ ಭದ್ರತೆ !!

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಜನರಿಗೆ ಭದ್ರತೆ ಇಲ್ಲ ಎಂಬ ಆರೋಪ ಇದೆ. ಆದರೆ ಗೃಹಸಚಿವರು ಇರುವ ಏರಿಯಾದಲ್ಲೇ ಸೂಕ್ತ ಭದ್ರತೆ ಇಲ್ಲ ಅಂದ್ರೆ ಏನು ಮಾಡುವುದು ಎನ್ನುವ ಪ್ರಶ್ನೆ ಇದೀಗ ನಗರದ ಜನರಲ್ಲಿ ಮೂಡಿದೆ. ಇದಕ್ಕೆ ಕಾರಣ ಗೃಹಸಚಿವ ಡಾ.ಜಿ. ಪರಮೇಶ್ವರ್​ ವಾಸವಿರುವ ಸದಾಶಿವನಗರದಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ.

ಜುಲೈ 6ರಂದು ಪರಮೇಶ್ವರ್​ ಅವರ ಸ್ವಕ್ಷೇತ್ರ ಕೊರಟಗೆರೆಯಿಂದ ರಘು ಎಂಬುವವರು ಗೃಹಸಚಿವರನ್ನ ಭೇಟಿ ಮಾಡಲು ಆಗಮಿಸಿದ್ದರು. ರಾತ್ರಿ 9.30ರ ಸುಮಾರಿಗೆ ರಘು ಗೃಹಸಚಿವರನ್ನ ಭೇಟಿ ಮಾಡಿ ಬಳಿಕ ಅವರ ಮನೆಯಿಂದ ಹೊರಬಂದು ಮೆಜೆಸ್ಟಿಕ್​ಗೆ ತೆರಳಲು ಕ್ಯಾಬ್​ಗಾಗಿ ಕಾಯುತ್ತಿದ್ದರು. ಈ ವೇಳೆ ಡಿಯೋ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಕಳ್ಳರು ರಘುಗೆ ಚಾಕು ತೋರಿಸಿ, ಒಂದು ಮೊಬೈಲ್​ ಹಾಗೂ ಜೇಬಿನಲ್ಲಿದ್ದ 10 ಸಾವಿರ ರೂ. ಹಣವನ್ನ ಕಿತ್ತೊಯ್ದಿದ್ದಾರೆ. ಈ ಘಟನೆ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ರಘು ದೂರು ನೀಡಿದ್ದಾರೆ.

ಗೃಹಸಚಿವರ ಮನೆ ಮುಂದೆ ಪೊಲೀಸ್ ಎಸ್ಕಾರ್ಟ್ ವಾಹನ ಇದ್ದರೂ ಡೊಂಟ್​ ಕೇರ್​ ಎಂದು ಕಳ್ಳರು ದುಷ್ಕೃತ್ಯ ಎಸಗಿದ್ದಾರೆ. ಗೃಹಸಚಿವರ ಏರಿಯಾದಲ್ಲಿ ಈ ಮಟ್ಟಿಗಿನ ಭದ್ರತೆ ಇರಬೇಕಾದರೆ, ಇನ್ನು ಬೇರೆ ಏರಿಯಾಗಳ ಪರಿಸ್ಥಿತಿ ಏನೆಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಅಲ್ಲದೇ ಗೃಹಸಚಿವರು ಅಂದ್ರೆ ರಾಜ್ಯದಲ್ಲಿರುವ ಭದ್ರತಾ ವ್ಯವಸ್ಥೆಯನ್ನ ನಿಯಂತ್ರಿಸುವವರು. ಭದ್ರತೆ ಬಗೆಗಿನ ನಿರ್ಧಾರಗಳನ್ನ ತೆಗೆದುಕೊಳ್ಳುವವರು. ಅಂಥವರು ವಾಸ ಮಾಡುವ ಏರಿಯಾದಲ್ಲೇ ಈ ರೀತಿ ಕಳ್ಳತನವಾಗಿದ್ದು, ರಾಜ್ಯದಲ್ಲಿನ ಪೊಲೀಸ್​ ವ್ಯವಸ್ಥೆಯನ್ನೇ ಪ್ರಶ್ನಿಸುವಂತಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv