ಪ್ರವಾಸಕ್ಕೆ ಬಂದಿದ್ದ ಮೈಸೂರಿನ ಪೌರಕಾರ್ಮಿಕ ನೀರಿನಲ್ಲಿ ಕೊಚ್ಚಿ ಹೋದ

ಕೊಡಗು: ಮೈಸೂರಿನಿಂದ ಪ್ರವಾಸಕ್ಕೆ ಬಂದಿದ್ದ ಪೌರ ಕಾರ್ಮಿಕನೊಬ್ಬ ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ಸೋಮವಾರಪೇಟೆ ತಾಲೂಕಿನ ಗುಮ್ಮನಕೊಲ್ಲಿಯಲ್ಲಿ ನಡೆದಿದೆ. ರಮೇಶ್ (25) ನೀರಿನಲ್ಲಿ ಕೊಚ್ಚಿಹೋದ ಪೌರ ಕಾರ್ಮಿಕ. ರಮೇಶ್ ತನ್ನ ಸ್ನೇಹಿತ ಕಿರಣ್‌ ಜತೆ ಕೊಡಗು ಜಿಲ್ಲೆಗೆ ಪ್ರವಾಸ ಬಂದಿದ್ದರು. ನಿನ್ನೆ ಸಂಜೆ ಇಬ್ಬರೂ ಗುಮ್ಮನಕೊಲ್ಲಿ ಬಳಿ ನದಿಗೆ ಇಳಿದಿದ್ದಾಗ ಇಬ್ಬರೂ ಮುಳುಗಿದ್ದು, ಈ ಸಂದರ್ಭ ಕಿರಣ್ ನನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು.

ಆದರೆ ರಮೇಶ್ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾನೆ‌. ಇಂದು ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಸಂಜೆವರೆಗೂ ಶೋಧ ಕಾರ್ಯ ನಡೆಸಿದ್ದಾರೆ. ಆದರೆ, ಯುವಕ ಪತ್ತೆಯಾಗದ ಹಿನ್ನೆಲೆಯಲ್ಲಿ ಶೋಧ ಕಾರ್ಯ ಸ್ಥಗಿತ ಮಾಡಲಾಗಿದೆ. ಜಿಲ್ಲೆಯಲ್ಲಿ ಧಾರಕಾರ ಮಳೆಯಾಗುತ್ತಿರುವ ಕಾರಣ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಈ ಸಂಬಂಧ ಕುಶಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.