8ರ ಪೋರನಿಂದ ತಾಯಿಯ ಅಂತ್ಯಸಂಸ್ಕಾರ..!

ಯಾದಗಿರಿ: ಕ್ಯಾನ್ಸರ್​ಗೆ ತುತ್ತಾಗಿ ಇಂದು ಸಾವನ್ನಪ್ಪಿದ ತಾಯಿಯ ಶವವನ್ನು 8 ವರ್ಷದ ಮಗ ಸ್ವತಃ ಸಂಸ್ಕಾರ ಮಾಡಿರುವ ಮನಕಲಕುವ ಘಟನೆ ಯಾದಗಿರಿ ಪಟ್ಟಣದಲ್ಲಿ ನಡೆದಿದೆ.
ಜಿಲ್ಲೆಯ ಸೈದಾಪೂರದ ಶಾಂತಮ್ಮ ಮತ್ತು ರಾಮಸಮುದ್ರ ಬಸಲಿಂಗಪ್ಪ ಇಬ್ಬರೂ 20 ವರ್ಷಗಳ ಹಿಂದೆ ಪ್ರೇಮವಿವಾಹ ಮಾಡಿಕೊಂಡು ಬೆಂಗಳೂರಿಗೆ ಬಂದಿದ್ರು. ಶಾಂತಮ್ಮ ಒಂದು ಗಂಡು ಮಗುವಾಗಿತ್ತು. ಗಾರೆ ಕೆಲಸ ಮಾಡಿಕೊಂಡು ವಾಸವಾಗಿದ್ದ ಬಸಲಿಂಗಪ್ಪನಿಗೆ ಕುಡಿತದ ಚಟ‌ ಹೆಚ್ಚಾಗಿ ದಿನಾ ಕುಡಿದು ಬಂದು ಹೆಂಡತಿಗೆ ತೊಂದರೆ ಕೊಡ್ತಿದ್ದ. ಇನ್ನೊಂದು ಕಡೆ ಶಾಂತಮ್ಮನಿಗೆ ಗಂಟಲು ಕ್ಯಾನ್ಸರ್​ ಆವರಿಸುತ್ತಾ ಬಂತು. ಗಂಡನ ಕಾಟ ತಾಳಲಾರದೆ ಶಾಂತಮ್ಮ ತನ್ನ ಮಗ ರವಿಯನ್ನು ಕರೆದುಕೊಂಡು ಯಾದಗಿರಿಗೆ ಬಂದಿದ್ದಾಳೆ. 15 ದಿನಗಳ ಹಿಂದೆ ಸರ್ಕಾರಿ ದವಾಖಾನೆಗೆ ಸೇರಿದ ಶಾಂತಮ್ಮ, ಚಿಕಿತ್ಸೆ ಫಲಕಾರಿಯಾಗದೆ ಇಂದು ಪ್ರಾಣ ಬಿಟ್ಟಿದ್ದಳು.
ತನ್ನ ತಾಯಿಯ ಶವಸಂಸ್ಕಾರಕ್ಕಾಗಿ ಯಾರ ಸಹಾಯ ಕೇಳದೆ, ರವಿ ಸತಃ ತಾನೆ ತಾಯಿಯ ಹೆಣವನ್ನು ತಂದು ಶವಸಂಸ್ಕಾರಕ್ಕೆ ಮುಂದಾಗಿದ್ದ. ಇದನ್ನು ಗಮನಿಸಿದ ಆಸ್ಪತ್ರೆಯ ಸಿಬ್ಬಂದಿ ಮತ್ತು ಪೋಲಿಸರು ಸ್ಥಳಕ್ಕಾಗಮಿಸಿ ಸಾರ್ವಜನಿಕರ ಸಹಾಯದಿಂದ ಜೆ.ಸಿ.ಬಿಯಿಂದ ಕುಣಿ ತೆಗೆಸಿ ರವಿಗೆ ಶವ ಸಂಸ್ಕಾರಕ್ಕೆ ಸಹಾಯ ಮಾಡಿದ್ದಾರೆ. ಯಾರ ನೆರವೂ ಇಲ್ಲದೇ 8 ವರ್ಷದ ರವಿ ತನ್ನ ತಾಯಿಯ ಶವಸಂಸ್ಕಾರ ಮಾಡಿದ ಹೃದಯವಿದ್ರಾವಕ ಘಟನೆ ನಿಜಕ್ಕೂ ನೋಡಗರ ಮನ ಕರಗಿಸಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv