ಅಫೇರ್‌ನಿಂದ ಪಟ್ಟ ಕಳಕೊಂಡ ಪತಿ-ಡೈವೋರ್ಸ್‌ನಿಂದ ಶ್ರೀಮಂತೆಯಾದಳು ಪತ್ನಿ!

ಇದು ಜಗತ್ತಿನ ಅತ್ಯಂತ ದುಬಾರಿ ಅಫೇರ್‌ ಪ್ರಕರಣ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇಲ್ಲಿ ಅಫೇರ್‌ನ ಬಲೆಗೆ ಬಿದ್ದಿರುವವನು ಜಗತ್ತಿನ ಅತಿದೊಡ್ಡ ಧನಿಕ. ಆದ್ರೆ ಅದೇ ಅಫೇರ್‌ ಈವಾಗ ಆತನನ್ನ ಜಗತ್ತಿನ ಅತಿದೊಡ್ಡ ಧನಿಕ ಪಟ್ಟ ಕಳಕೊಳ್ಳುವಂತೆ ಮಾಡ್ತಾ ಇದೆ. ಆತನ ಸಂಪತ್ತು ಕೂಡ ಅರ್ಧಕ್ಕರ್ಧ ಕಳೆದು ಹೋಗ್ತಿದೆ. ವಿಶೇಷ ಅಂದ್ರೆ, ಅದೇ ಅಫೇರ್‌ನಿಂದಾಗಿ ಆತನ ಹೆಂಡತಿ ಈಗ ಜಗತ್ತಿನ ಅತಿದೊಡ್ಡ ಮಹಿಳಾ ಶ್ರೀಮಂತೆಯಾಗ್ತಾ ಇದ್ದಾಳೆ.

ದುಬಾರಿಯಾಯ್ತು 54ರ ಹರೆಯದ ತುಂಟಾಟ

ಅಂದ ಹಾಗೆ ಇದು 137 ಶತಕೋಟಿ ಡಾಲರ್ ಒಡೆಯ, ಅಮೇಜಾನ್‌ ಕಂಪನಿಯ ಸಂಸ್ಥಾಪಕನ ವಿಚಿತ್ರ ಅವಸ್ಥೆ. 54ರ ಹರೆಯದ ಜೆಫ್‌ ಬೊಜೋಸ್‌, ಸದ್ಯ ಜಗತ್ತಿನ ಅತಿದೊಡ್ಡ ಶ್ರೀಮಂತ. 1994ರಲ್ಲಿ ಸಣ್ಣದೊಂದು ಗ್ಯಾರೇಜ್‌ನಲ್ಲಿ ಆರಂಭವಾದ ಜೆಫ್‌ ಬೊಜೋಸ್‌ನ ಅಮೇಜಾನ್‌ ಕಂಪನಿ, ಇವತ್ತು ವಿಶ್ವವ್ಯಾಪಿಯಾಗಿ ಬೆಳೆದಿದೆ. ಆದ್ರೆ ಈ ಅವಧಿಯಲ್ಲೇ ಜೆಫ್‌ ಬೊಜೋಸ್‌ ತುಂಟನಾಗಿಬಿಟ್ಟ ಅನ್ನೋದೇ ವಿಪರ್ಯಾಸ. ಅದರಲ್ಲೂ ಆತ ತುಂಟನಾಗಲು ಹೊರಟದ್ದು ತನ್ನದೇ ಸ್ನೇಹಿತನ ಹೆಂಡತಿ ಲಾರೆನ್ ಸಾಂಚೆಸ್‌ ಜೊತೆಗೆ. ಆಕೆಯದ್ದು 48ರ ಹರೆಯ. ಆದ್ರೂ ಆಕರ್ಷಕ ಮೈಕಟ್ಟು ಹೊಂದಿರೋ ಆಕೆ ಟಿವಿ ಶೋ ನಿರೂಪಕಿ. ಹಲವು ಸಮಯದಿಂದಲೂ ನಡೀತಿದ್ದ ಇಬ್ಬರ ನಡುವಿನ ಈ ರಹಸ್ಯ ಅಫೇರ್‌ ಕಡೆಗೂ ಬಯಲಾಗದೇ ಇರಲಿಲ್ಲ. ಬಯಲಾದಾಗ ಜೆಫ್‌ ಬೊಜೋಸ್‌ನ ಸುಂದರ ಸಂಸಾರ, ಸಂಸಾರವಾಗಿ ಉಳಿಯಲಿಲ್ಲ. ಯಾಕಂದ್ರೆ ಜೆಫ್‌ನ ಹೆಂಡತಿ ಮೆಕೆನ್‌ಜೀ ಜೆಫ್‌ಗೆ ಹೆಂಡತಿಯಾಗಿ ಮುಂದುವರಿಯಲು ಬಯಸಲಿಲ್ಲ.

ಅದು 5 ಲಕ್ಷ ಕೋಟಿಯ ಡೈವೋರ್ಸ್‌!

ಅಮೇಜಾನ್ ಧಣಿಯ ಅಫೇರ್‌ ರಹಸ್ಯ ಬಯಲಾಗುತ್ತಲೆ, ಮಡದಿ ಮೆಕೆನ್‌ಜೀ ಡೈವೋರ್ಸ್‌ಗೆ ಮುಂದಾದಳು. ಪರಸ್ಪರ ಒಪ್ಪಿಗೆ ಮೇಲೆ ಡೈವೋರ್ಸ್‌ ಮಾಡಿಕೊಳ್ಳೋದಕ್ಕೆ ಜೆಫ್ ಬೊಜೋಸ್‌ ಕೂಡ ಸಮ್ಮತಿ ಸೂಚಿಸಿದ್ದ. ಆದ್ರೆ ತಲೆನೋವಾಗಿ ಪರಿಣಮಿಸಿರೋದು, ಮೆಕೆನ್‌ಜೀಗೆ ಕೊಡಬೇಕಾಗಿ ಬಂದಿರೋ ಪರಿಹಾರ ಮೊತ್ತ. ಯಾಕಂದ್ರೆ ಬರೊಬ್ಬರಿ 69 ಶತಕೋಟಿ ಡಾಲರ್‌ ಸೆಟಲ್‌ಮೆಂಟ್‌ಗೆ ಮೆಕೆನ್‌ಜೀ ಬೇಡಿಕೆ ಇಟ್ಟಿದ್ದಾಳೆ. ರೂಪಾಯಿಗಳಲ್ಲಿ ಲೆಕ್ಕ ಹಾಕೋದಾದ್ರೆ ಹೆಚ್ಚು ಕಡಿಮೆ 5 ಲಕ್ಷ ಕೋಟಿ ರೂಪಾಯಿ. ಈ ಮೊತ್ತಕ್ಕೆ ಅಮೇಜಾನ್‌ ಒಡೆಯ ಒಪ್ಪಲೇಬೇಕಾದ ಪ್ರಮೇಯ ಬಂದಿದೆ. ಹಾಗೊಂದು ವೇಳೆ ಇಷ್ಟೊಂದು ಭಾರೀ ಮೊತ್ತದ ಸೆಟಲ್‌ಮೆಂಟ್‌ ನಡೆದಲ್ಲಿ, ಮಡದಿ ಮೆಕೆನ್‌ಜೀ ಜಗತ್ತಿನಲ್ಲೇ ಅತಿ ದೊಡ್ಡ ಮಹಿಳಾ ಶ್ರೀಮಂತೆ ಅಂತಾ ಕರೆಸಿಕೊಳ್ಳಲಿದ್ದಾಳೆ. ಇನ್ನೊಂದ್ಕಡೆ ಗಂಡ ಜೆಫ್ ಬೊಜೋಸ್‌, ಜಗತ್ತಿನ ಅತಿದೊಡ್ಡ ಶ್ರೀಮಂತ ಅನ್ನೋ ಪಟ್ಟವನ್ನ ಕಳಕೊಳ್ಳಲಿದ್ದಾರೆ. ಇದೆಂಥಾ ರಾಸ-ವಿಲಾಸ ಅಲ್ವಾ?