ಕಾಂಗ್ರೆಸ್ ಪಕ್ಷ ಜೆಡಿಎಸ್ ಜೊತೆ ವಿಲೀನವಾಗುವುದು ಸೂಕ್ತ: ಶೆಟ್ಟರ್​

ಹಾವೇರಿ: ಕಾಂಗ್ರೆಸ್ ಪಕ್ಷ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡುವ ಬದಲು ಕಾಂಗ್ರೆಸ್ ಪಕ್ಷವನ್ನೇ ಜೆಡಿಎಸ್ ಜೊತೆ ವಿಲೀನ ಮಾಡಿಕೊಳ್ಳುವುದು ಸೂಕ್ತ ಅಂತಾ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನೂರು ವರ್ಷದ ಪಕ್ಷ. ಆದ್ರೆ, ದೇಶದ ಸಣ್ಣ ಸಣ್ಣ ಪಕ್ಷಗಳ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವ ಪ್ಲಾನ್ ಮಾಡುತ್ತಿದೆ. ಆದರೆ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಮತ್ತೆ ನರೇಂದ್ರ ಮೋದಿಗೆ ಮುಂದಿನ ಚುನಾವಣೆಯಲ್ಲಿ ಆಶೀರ್ವಾದ ಮಾಡುತ್ತಾರೆ ಅಂತಾ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಇನ್ನೂ ಸಂಪುಟ ರಚನೆ ಆಗಿಲ್ಲ. ಕಾಂಗ್ರೆಸ್ ಪಕ್ಷದ ಯುವರಾಜ ಬರುವವರೆಗೂ ಸಂಪುಟ ರಚನೆ ಆಗಲ್ಲ. ಮಳೆಯಿಂದ ಅನೇಕ ಕಡೆ ಹಾನಿಯಾಗಿದೆ ಅಧಿಕಾರಿಗಳು ಸರಿಯಾದ ಕೆಲಸ ಮಾಡ್ತಿಲ್ಲ. ಸಂಪುಟ ಇಲ್ಲದೇ ಹಾನಿಗೆ ಪರಿಹಾರ ಸಿಗುವುದಿಲ್ಲ ಅಂತಾ ಹೇಳಿದ್ರು. ದೇವೇಗೌಡರು ಎಷ್ಟು ದಿನ ಬದುಕಿರುತ್ತಾರೋ ಗೊತ್ತಿಲ್ಲ. ಆದ್ರೆ ಅವರ ಆಸೆಯಂತೆ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿ ಮಾಡಿ ಅವರ ಆಸೆ ತೀರಿಸಿಕೊಂಡಿದ್ದಾರೆ ಅಂತಾ ಹೇಳಿದರು.

ನಾಲ್ಕು ವರ್ಷಗಳ ಹಿಂದೆ ಯುಪಿಎ ಸರ್ಕಾರದಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿತ್ತು. ಅದನ್ನು ಮೋದಿ ಸರಿಪಡಿಸಿದ್ದಾರೆ. ಅಲ್ಲದೇ, ಯುಪಿಎ ಸರ್ಕಾರದಲ್ಲಿ 8.4 ಇದ್ದ ಹಣದುಬ್ಬರ ಜಿಎಸ್​ಟಿ ಜಾರಿಗೆ ಬಂದಿದ್ದರಿಂದ 4.8 ಇಳಿಕೆಯಾಗಿದೆ. ಜನ್ ದನ್ ಯೋಜನೆ ಮುಖಾಂತರ 31 ಕೋಟಿ 61 ಲಕ್ಷ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಇದರಿಂದ ಬಡವರಿಗೆ ಅನುಕೂಲವಾಗಿದೆ ಅಂತಾ ತಿಳಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv