ಒಂದೇ ಒಂದು ಸುತ್ತಿನಲ್ಲೂ ಕಾಂಗ್ರೆಸ್​ಗೆ ಮುನ್ನಡೆ ಸಿಗಲಿಲ್ಲ- ಆಯನೂರು ಮಂಜುನಾಥ್

ಶಿವಮೊಗ್ಗ : ಮತ ಎಣಿಕೆಯಲ್ಲಿ ಒಂದೇ ಒಂದು ಸುತ್ತಿನಲ್ಲೂ ಕಾಂಗ್ರೆಸ್​ಗೆ ಮುನ್ನಡೆ ಸಿಗಲಿಲ್ಲ. ಕಾರ್ಯಕರ್ತರು ಶ್ರಮ ಹಾಕದಿದ್ದರೆ ಈ ಮಟ್ಡಿಗಿನ ಮತಗಳು ನನಗೆ ಸಿಗುತ್ತಿರಲಿಲ್ಲ. ಪರಿಷತ್ ಚುನಾವಣೆಯಲ್ಲಿ ಮಳೆಯ ಆರ್ಭಟವಿದ್ದರೂ ಉತ್ತಮ ಮತದಾನವಾಯಿತು ಎಂದು ನೈರುತ್ಯ ಪದವೀಧರ ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು ನನಗೆ 25, 250 ಮತ ಚಲಾವಣೆಯಾಗಿದ್ದು, ಕಾಂಗ್ರೆಸ್ ಗೆ 16 ಸಾವಿರ ಮತ ಸಿಕ್ಕಿದೆ. 3999 ಮತಗಳು ಅನರ್ಹ ಮತಗಳು ಚಲಾವಣೆ ಆಗಿವೆ ಅಂತಾ ಆಯನೂರು ತಿಳಿಸಿದ್ರು.
ಉಡುಪಿ, ಮಂಗಳೂರು, ಹೊನ್ನಾಳಿ, ಮಡಿಕೇರಿ ಮತ್ತಿತರ ಕಡೆ ಶಾಸಕರು ಕ್ಷೇತ್ರಕ್ಕೆ ಇಳಿದ ಪರಿಣಾಮ 67 ಸಾವಿರ ಮತದಾನವಾಯಿತು. ನನ್ನನ್ನು ಬೆಂಬಲಿಸಿದ ಮತದಾರರಿಗೆ ಅಭಿನಂದಿಸುವುದರ ಜತೆಗೆ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಯತ್ನಿಸುತ್ತೇನೆ.
ನಾವು ವಿಷಯಾಧಾರಿತ ಚುನಾವಣೆ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ವಿದ್ಯಾವಂತ ಮತದಾರ ಸಮೂಹ ಅಭಿಮಾನವಿಟ್ಟಿದ್ದಕ್ಕೆ ಹೆಚ್ಚಿನ ಮತ ಲಭಿಸಿವೆ. ಇದಲ್ಲದೆ, ನಾಲ್ಕು ಸದನವನ್ನು ನೋಡುವ ಭಾಗ್ಯವನ್ನು ಬಿಜೆಪಿ ನನಗೆ ಕರುಣಿಸಿದೆ. ಎಸ್.ಎಂ.ಕೃಷ್ಣ ಮತ್ತು ಡಿ.ಬಿ.ಚಂದ್ರೇಗೌಡರ ನಂತರ ನನಗೆ ಈ ಭಾಗ್ಯ ಸಿಕ್ಕಿದೆ ಎಂದು ಆಯನೂರು ಮಂಜುನಾಥ್ ಸಂತಸ ವ್ಯಕ್ತಪಡಿಸಿದ್ರು. ವಿಧಾನಸಭೆಗಿಂತ ಕಡಿಮೆ ಸದಸ್ಯರನ್ನು ಹೊಂದಿರುವ ವಿಧಾನ ಪರಿಷತ್​ನಲ್ಲಿ ಉತ್ತಮ ಚರ್ಚೆ ನಡೆಸುವ ಹಾಗೂ ಒಳ್ಳೆಯ ನಿರ್ಧಾರ ಕೈಗೊಳ್ಳುವ ಅವಕಾಶ ಇದೆ ಎಂದು ಹೇಳಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv