ವಿವಾದಿತ ದೇವಾಲಯ ನೆಲಸಮಗೊಳಿಸಿ ಕ್ಯಾತೆ ತಗೆದ ಆಂಧ್ರ ಸರ್ಕಾರ..!

ಕೋಲಾರ: ವಿವಾದಿತ ದೇವಾಲಯವನ್ನು ಕೆಡವಿ ಆಂಧ್ರ ಪ್ರದೇಶ ಸರ್ಕಾರ ಮತ್ತೆ ಕ್ಯಾತೆ ತೆಗೆದಿದೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ದೋಣಿಮಡಗು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಮುಷ್ಟ್ರಹಳ್ಳಿ ಗ್ರಾಮದ ಮಲ್ಲಪ್ಪನ ಬೆಟ್ಟ, ಬೆಟ್ಟದ ಮೇಲಿರುವ ಐತಿಹಾಸಿಕ ಹಿನ್ನೆಲೆ ಹೊಂದಿರುವ ಮಲ್ಲೇಶ್ವರ ಸ್ವಾಮಿ ದೇವಾಲಯವನ್ನು ಸದ್ಯ ಆಂದ್ರ ಸರ್ಕಾರ ಕೆಡವಿ ವಿವಾದ ಸೃಷ್ಟಿಸಿದೆ.
ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಈ ಮಲ್ಲೇಶ್ವರ ಸ್ವಾಮಿ ದೇವಾಲಯವನ್ನು ಮೊದಲಿನಿಂದಲೂ ಕರ್ನಾಟಕ ರಾಜ್ಯ ಸರ್ಕಾರವೇ ನಿರ್ವಹಣೆ ಮಾಡುತ್ತಾ ಬಂದಿದೆ. ಆದ್ರೆ, ಕಳೆದ ವರ್ಷ ಆಂಧ್ರ ಸರ್ಕಾರ ಮಲ್ಲಪ್ಪನ ಬೆಟ್ಟಕ್ಕೆ ರಸ್ತೆ ನಿರ್ಮಾಣ ಮಾಡಿ ದೇವಾಲಯವನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವ ಪ್ರಯತ್ನ ಮಾಡಿತ್ತು. ಈ ಸಲುವಾಗಿ ಆಂಧ್ರ ಹಾಗೂ ಕರ್ನಾಟಕ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ಮಾಡಿ ಗಡಿ ಗುರುತು ಮಾಡಿದ್ರು. ದೇವಾಲಯ ಆಂಧ್ರ, ತಮಿಳುನಾಡು, ಹಾಗೂ ಕರ್ನಾಟಕ ಮೂರೂ ರಾಜ್ಯಗಳ ಗಡಿಯಲ್ಲಿರುವುದುರಿಂದ ಇದು ವಿವಾದಿತ ದೇವಾಲಯವಾಗಿ ಉಳಿದಿತ್ತು. ಇನ್ನು ವಿವಾದ ಬಗೆಹರಿಯುವ ಮುನ್ನವೇ ಈಗ ಆಂಧ್ರ ಸರ್ಕಾರ ದೇವಾಲಯವನ್ನು ಜೀರ್ಣೋದ್ಧಾರ ಮಾಡುವ ದೃಷ್ಟಿಯಿಂದ ಕೆಡವಿದೆ. ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಸ್ಪರ್ಧಿಸುವ ಕುಪ್ಪಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಡಿಯಲ್ಲಿ ದೇವಾಲಯ ಬರುವುದರಿಂದ ಹಾಗೂ ದೇವಾಲಯ ಪ್ರಾಕೃತಿಕವಾಗಿ, ಐತಿಹಾಸಿಕವಾಗಿ, ಬಹಳ ವಿಶೇಷವಾಗಿದ್ದು, ಲಕ್ಷಾಂತರ ಭಕ್ತರನ್ನು ಹೊಂದಿದೆ. ಹಾಗಾಗಿ ಏನಾದ್ರು ಮಾಡಿ ದೇವಾಲಯವನ್ನು ತಮ್ಮ ವಶಕ್ಕೆ ಪಡೆಯ ಬೇಕು ಅನ್ನೋದು ಆಂಧ್ರ ಸರ್ಕಾರದ ಉದ್ದೇಶವಾಗಿದೆ. ಅದಕ್ಕಾಗಿಯೇ ಆಂಧ್ರ ಸರ್ಕಾರ ಈ ದೇವಾಲಯದ ಮೇಲೆ ವಿಶೇಷ ಕಾಳಜಿ ವಹಿಸುತ್ತಿದೆ. ಸದ್ಯ ವಿಷಯ ತಿಳಿದು ಸ್ಥಳಕ್ಕೆ ಕೋಲಾರ ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv