ಫುಟ್ಬಾಲ್​ ವರ್ಲ್ಡ್​ ಕಪ್​ ಸೆಮಿಫೈನಲ್ಸ್​: ಗುಹೆಯಿಂದ ಹೊರಬಂದ ಬಾಲಕರ ಸಪೋರ್ಟ್​ ಇವರಿಗೇ ಅಂತೆ..!?

ಚಿಯಾಂಗ್​ ರೈ (ಥಾಯ್ಲೆಂಡ್): ವೈಲ್ಡ್ ಬೋರ್​ ಫುಟ್​ಬಾಲ್​ ತಂಡದ 13 ಮಂದಿ ಗುಹೆಯಿಂದ ಹೊರಬಂದಾಯ್ತಲ್ಲ..! 13 ಮಕ್ಕಳೂ ಚಿಕಿತ್ಸೆ ಪಡೆಯುತ್ತಿರುವ ಇಲ್ಲಿನ ಆಸ್ಪತ್ರೆಯೆದುರು ಇದೀಗ ಸಂಭ್ರಮಾಚರಣೆ ವಾತಾವರಣ ನೆಲೆಸಿದೆ. ರಕ್ಷಣಾ ಪಡೆಯ ಯಶಸ್ವಿ ಕಾರ್ಯಚಾರಣೆಗೆ ಇಡೀ ವಿಶ್ವವೇ ಸೆಲ್ಯೂಟ್​ ಹೊಡೆದಿದೆ. ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಇದೆಲ್ಲದರ ಮಧ್ಯೆ, ರಕ್ಷಣಾ ಕಾರ್ಯಾಚರಣೆ ವೇಳೆ ಥಾಯ್ಲೆಂಡ್​ ವಾಯುಪಡೆಯ ಮಾಜಿ ಯೋಧ Saman Kunan ಸಾವನ್ನಪ್ಪಿದ್ದು ವಿಷಾದದ ಛಾಯೆ ಮೂಡಿಸಿದೆ.
ಕುತೂಹಲಕಾರಿ ಸಂಗತಿಯೆಂದರೆ, ಖುದ್ದು ಥಾಯ್ಲೆಂಡ್​ ಮತ್ತು ಗುಹಾಂತರಗೊಂಡಿದ್ದ ವೈಲ್ಡ್ ಬೋರ್​ ತಂಡ ಈಗ ಒಂದು ನಿರ್ಧಾರಕ್ಕೆ ಬಂದಿದೆ. ಏನಪಾ ಅಂದ್ರೆ ನಾಳೆ ನಡೆಯಲಿರುವ ಫುಟ್ಬಾಲ್​ ವರ್ಲ್ಡ್​ ಕಪ್​ ಸೆಮಿಫೈನಲ್ಸ್​ನಲ್ಲಿ ಇಂಗ್ಲೆಂಡ್​ ತಂಡವನ್ನು ಬೆಂಬಲಿಸಲು ಎಲ್ರೂ ನಿರ್ಧರಿಸಿದ್ದಾರೆ. ಇದಕ್ಕೆ ಒಂದು ಬಲವಾದ ಕಾರಣವೂ ಇದೆ! 13 ವೈಲ್ಡ್ ಬೋರ್​ಗಳು ಆರಂಭದಲ್ಲಿ 9 ದಿನಗಳ ಕಾಲ ಗುಹೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರಲ್ಲ? ಅವರನ್ನೆಲ್ಲ ಮೊದಲು ಪತ್ತೆ ಹಚ್ಚಿದ್ದು ಇದೇ  ಬ್ರಿಟನ್​ನ ಇಬ್ಬರು ತಜ್ಞ, ಹಿರಿಯ ಈಜುಗಾರರು.

ರಿಚರ್ಡ್​ ಸ್ಟಾಂಟನ್ (57)​ ಮತ್ತು ಜಾನ್ ವೊಲಾಂಥೆನ್​ (47) ಎಂಬಿಬ್ಬರು ಬ್ರಿಟನ್​ನಿಂದ ಹೆಲಿಕಾಪ್ಟರ್​ನಲ್ಲಿ ಹಾರಿಬಂದವರೇ ಗುಹೆಯ ಮಹಾದ್ವಾರದ ಎದುರು ಸರಸರನೆ ಇಳಿದು, ಯಾರಿಗೂ ಕಾಯದೆ, ಸಿದಾ ಗುಹೆ ಹೊಕ್ಕಿದ್ದರು. ಮಕ್ಕಳನ್ನ ಪತ್ತೆ ಹಚ್ಚಬೇಕು ಎಂಬುದಷ್ಟೇ ಅವರೆದುರು ಇದ್ದ ಬೆಟ್ಟದಷ್ಟು ಹೆಬ್ಬಯಕೆ. ಅದನ್ನು ಅವರಿಬ್ಬರೂ ಸಾಧಿಸಿದಾಗ ಇಡೀ ವಿಶ್ವ ಆನಂದಭಾಷ್ಪ ಸುರಿಸಿತ್ತು.
ಹಾಗಾಗಿ ಆ ಇಬ್ಬರಿಗೂ ಕೃತಜ್ಞತೆ ಸಲ್ಲಿಸಲು ನಾಳೆ ನಡೆಯುವ ಕ್ರೊಯೇಶಿಯಾ ಮತ್ತು ಇಂಗ್ಲೆಂಡ್​ ಸೆಮಿಫೈನಲ್ಸ್​ ಪಂದ್ಯದಲ್ಲಿ ಇಂಗ್ಲೆಂಡ್​ ತಂಡಕ್ಕೆ ಚೀರ್​ ಬಾಯ್ಸ್​ ಆಗಲು ಈ 13 ಬಾಲಕರು ಮತ್ತು ಥಾಯ್ಲೆಂಡ್​ ಸರಕಾರ ಕಾದುಕುಳಿತಿದೆ.
ಮಕ್ಕಳ ಫುಟ್ಬಾಲ್​ ನಂಟು: ಇದೇ ವೇಳೆ, ವೈಲ್ಡ್ ಬೋರ್​ ತಂಡದ 13 ಗುಹೆವಾಸಿಗಳು ಇಂಗ್ಲಂಡಿನ ಮ್ಯಾಂಚೆಸ್ಟರ್ ಯುನೈಟೆಡ್​ ಫುಟ್ಬಾಲ್​ ತಂಡದ ಕಟ್ಟಾ ಅಭಿಮಾನಿಗಳು ಎಂಬುದು ಬಹಿರಂಗವಾಗಿದೆ. ಇದನ್ನು ಅರಿತ ಮ್ಯಾಂಚೆಸ್ಟರ್ ಫುಟ್ಬಾಲ್​ ತಂಡದ ಸದಸ್ಯರು ಹದಿಮೂರೂ ವೈಲ್ಡ್ ಬೋರ್​ಗಳನ್ನ ಓಲ್ಡ್​ ಟ್ರಫರ್ಡ್ ಸ್ಟೇಡಿಯಂ​ಗೆ ಆಹ್ವಾನಿಸಿದೆ. ಬನ್ನಿ ಮಕ್ಕಳಾ, ನಿಮ್ಮೆದುರು ನಿಮಗಾಗಿ ವಿಶೇಷ ಪಂದ್ಯವನ್ನು ಆಡುತ್ತೇವೆ. ನೋಡ ಬನ್ನಿ ಎಂದು ಆಹ್ವಾನ ನೀಡಿದ್ದಾರೆ! ಜತೆಗೆ, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಅಷ್ಟೂ ಸ್ವಿಮ್ಮರ್ಸ್, ಡೈವರ್ಸ್​ಗಳಿಗೂ ವಿಶೇಷ ಆಹ್ವಾನ ನೀಡಲಾಗಿದೆ.