ಥಾಯ್​​ ಫುಟ್​ಬಾಲ್​ ತಂಡದ ಕೋಚ್​ ಅನಾಥ.. ಮಕ್ಕಳನ್ನ ಕಾಪಾಡಿದ್ದು ಆತನ ಪ್ರಾರ್ಥನೆಯೇ..!?

ಚಿಯಾಂಗ್​ ರೈ (ಥಾಯ್ಲೆಂಡ್): ಜೂನ್​ 23ರಂದು ಏನಾಯಿತೆಂದರೆ .. ಸದಾ ಹಸಿರಿನಿಂದ ಕಂಗೊಳಿಸುವ ಥಾಮ್​ ಲುವಾಂಗ್​ ನಂಗ್​ ನಾನ್​ ಎಂಬ ಬೆಟ್ಟಪ್ರದೇಶದಲ್ಲಿ ಸ್ವಲ್ಪಮಟ್ಟಿಗೆ ಪಟ್ಟಣ ಪ್ರದೇಶದಂತಿರುವ ಮಾ ಸಾಯಿ ಎಂಬಲ್ಲಿ ವಾಸವಿದ್ದ ‘ವೈಲ್ಡ್ ಬೋರ್’ ಸಾಕರ್​ ತಂಡದ 12 ಬಾಲಕರು ದುರ್ಗಮ ಗುಹೆಯೊಳಕ್ಕೆ ಹೊಕ್ಕಿದ್ದರು. ಅವರಿಗೆ ಮಾರ್ಗದರ್ಶಕನಾಗಿದ್ದು ತಂಡದ ಯುವ ಕೋಚ್​ ಎಂಬುದು ಗಮನಾರ್ಹ. ತಂಡದ ಮುಖ್ಯ ಕೋಚ್​ 37 ವರ್ಷದ ನೊಪ್ಪಾರಟ್​ ಖಂತವೊಂಗ್ ಬೇರೆ ಕೆಲಸ ನಿಮಿತ್ತ, ತನ್ನ ತಂಡದ ಜತೆ ಅಂದು ಪ್ರಾಕ್ಟೀಸ್​ಗೆ ಹೋಗಿರಲಿಲ್ಲ.
ಮಕ್ಕಳ ಹಠದ ಮುಂದೆ ಕರಗಿದ ಆ ಯುವ ಕೋಚ್​, ತಂಡದ ಬಾಲಕನೊಬ್ಬನ ಹುಟ್ಟುಹಬ್ಬ ಆಚರಣೆಯನ್ನು ವಿಭಿನ್ನ ರೀತಿಯಲ್ಲಿ ಆಚರಿಸೋಣ ಎಂದಾಗ ಎಲ್ರೂ ಗುಹೆ ಹೊಕ್ಕಿದ್ದಾರೆ. ಮುಂದೆ ಪಡಬಾರದ ಪಡಿಪಾಟಲು ಪಟ್ಟಿದ್ದಾರೆ. ಅದೀಗ ಇಡೀ ವಿಶ್ವಕ್ಕೆ ಗೊತ್ತಾಗಿದೆ. ಈ ಮಧ್ಯೆ, ಆ ಕೋಚ್​ ಯಾರಪ್ಪ, ಅವನ ಹಿನ್ನೆಲೆ ಏನು? ಅರಿವುಗೇಡಿ ಕೋಚ್​ ಮಕ್ಕಳ ಇಂತಹ ದುಸ್ಸಾಹಸಕ್ಕೆ ಸೈ ಎಂದಿದ್ದು ಯಾಕೆ? ಅವನಿಗಾದರೂ ಬುದ್ಧಿ ಬೇಡವಾ? ಎಂದೆಲ್ಲಾ ಜಗತ್ತಿನ ಅಷ್ಟೂ ಅಮ್ಮಂದಿರು ಕೋಚ್​ ಗೆ ಹಿಡಿಶಾಪ ಹಾಕುತ್ತಿದ್ದಾರೆ. ಬನ್ನಿ ಆ ಕೋಚ್​ ಯಾರು ಎಂದು ಪರಿಚಯ ಮಾಡಿಕೋಳ್ಳೋಣ.

ಅದಕ್ಕೂ ಮುನ್ನ, ಇಲ್ಲೊಂದು ಕುತೂಹಲದ ಸಂಗತಿ ಹೇಳುವುದಾದರೆ.. ಥಾಯ್ಲೆಂಡ್​ ಬುದ್ಧರ ನಾಡು. ಎಕಾಪೊಲ್​ ಚಾಂತವಾಂಗ್ ಎಂಬ ಆ ಕೋಚ್​ ದಿನಾ ಧ್ಯಾನ/ಪ್ರಾರ್ಥನೆ ಮಾಡುವುದನ್ನ ಕರಗತ ಮಾಡಿಕೊಂಡಿದ್ದ. ಅದರಿಂದಲೇ ತನ್ನ ಜೀವನದಲ್ಲಿ ಶಾಂತಿ ಕಂಡುಕೊಂಡಿದ್ದ. ಬೌದ್ಧ ಸನ್ಯಾಸಿಗಳ ಜತೆ ಒಳ್ಳೆಯ ಸ್ನೇಹ ಸಂಪಾದಿಸಿದ್ದ. ದಿನಾ ಒಂದು ಗಂಟೆ ಪ್ರಾರ್ಥನೆಯಲ್ಲಿ ತೊಡಗುತ್ತಿದ್ದ. ಮುಂದೇ ಇದೇ ಆತನ ಕೈಹಿಡಿಯುತ್ತದೆ ಎಂದು ಆತ ಕನಸು ಮನಸಿನಲ್ಲೂ ಭಾವಿಸಿರಲಿಕ್ಕಿಲ್ಲ.
ಗುಹೆಯಲ್ಲಿ ಮಕ್ಕಳ ಜತೆ ಭೂಗತನಾದಾಗ ಆತನ ನೆರವಿಗೆ ಬಂದಿದ್ದೇ ಈ ಬೌದ್ಧ ಪ್ರಾರ್ಥನೆ. ಮಕ್ಕಳನ್ನು ಹುರಿದುಂಬಿಸುತ್ತಾ, ಗಂಟೆಗಟ್ಟಲೇ ಮಕ್ಕಳ ಜತೆಗೂಡಿ ಪ್ರಾರ್ಥನೆಯಲ್ಲಿ ತೊಡಗುತ್ತಿದ್ದ. ಬಹುಶಃ ಆ ಮಕ್ಕಳ ಮೊರೆ ದೇವರನ್ನು ತಲುಪಿರಬಹುದು. ಹಾಗಾಗಿಯೇ ಮಕ್ಕಳು ಒಬ್ಬೊಬ್ಬರೇ ಬಚಾವಾಗಿ ಬರುತ್ತಿದ್ದಾರೆ.
ವಾಪಸ್ ಬಂದು,​ ಕೋಚ್​ ಬಗ್ಗೆ ಡಿಟೇಲ್​ ಆಗಿ ಹೇಳುವುದಾದರೆ ..
ಆತ ವೈಲ್ಡ್​ ಬೋರ್​ ಸಾಕರ್​ ತಂಡದ ಸಹಾಯಕ ಕೋಚ್​. ಹೆಸ್ರು.. ಎಕಾಪೊಲ್​ ಚಾಂತವಾಂಗ್​ (ಅಡ್ಡಹೆಸರು-ಅಕೆ!, ವಯಸ್ಸು 25 ವರ್ಷ). ತನ್ನ ಏಳನೇ ವಯಸ್ಸಿಗೇ ಫುಟ್ಬಾಲ್​ ಅನ್ನು ಒದೆಯತೊಡಗಿದ್ದ! ಹೀಗಿರುವಾಗ ಮಾ ಸಾಯಿ ಪಟ್ಟಣದಲ್ಲಿ ಸಾಂಕ್ರಾಮಿಕ ರೋಗ ಹರಡಿಕೊಳ್ಳುತ್ತದೆ. ಅದರಲ್ಲಿ ಬಾಲಕ ಎಕಾಪೊಲ್​ ಚಾಂತವಾಂಗ್​ನ ಅಪ್ಪ-ಅಮ್ಮ ಸಾವಿಗೀಡಾಗುತ್ತಾರೆ. ಬಾಲಕ ಎಕಾಪೊಲ್​ ಏಕಾಂಗಿಯಾಗುತ್ತಾನೆ. ಆದರೆ ಆ ಬಾಲಕನನ್ನ ಅನಾಥನಾಗಲು ಬಿಡದೆ ಆತನ ಅಜ್ಜಿ ಮತ್ತು ಚಿಕ್ಕಮ್ಮ ಅವನ ಪಾಲನೆ-ಪೋಷಣೆ ಜವಾಬ್ದಾರಿ ಹೊತ್ತಿಕೊಳ್ಳುತ್ತಾರೆ. ಮೊಮ್ಮಗ ಅಡ್ಡದಾರಿ ಹಿಡಿಯದಂತೆ ಶಿಸ್ತಿನಿಂದ ಅವನನ್ನು ಬೆಳೆಸುತ್ತಾರೆ. ಕೆಟ್ಟ ಚಟಗಳನ್ನ ಅಂಟಿಸಿಕೊಳ್ಳದೇ ಸನ್ಮಾರ್ಗದಲ್ಲಿ ನಡೆಯುತ್ತಾನೆ.
ಮುಂದೆ ಅವನು ಫುಟ್ಬಾಲ್​ ಚೆನ್ನಾಗಿ ಆಡುತ್ತಾ ತಂಡವೊಂದರ ಸಹಾಯಕ ಕೋಚ್​ ಸಹಾ ಆಗುತ್ತಾನೆ. ಆ ತಂಡವೇ ವೈಲ್ಡ್​ ಬೋರ್​. ತಂಡದ ಬಾಲಕರ ಮೇಲೆ ಅಪಾರ ಕಾಳಜಿ ಹೊಂದುತ್ತಾ ಎಲ್ಲರಿಗೂ ಹಿರಿಯಣ್ಣನಾಗಿ ಚಾಲ್ತಿಗೆ ಬರುತ್ತಾನೆ.
ಅಂದಹಾಗೆ, ಗುಹೆಯಿಂದ ಎಲ್ಲ ಮಕ್ಕಳೂ ತಮ್ಮ ಪಾಲಕರಿಗೆ ಪತ್ರ ಬರೆದಾಗ ಅಸಿಸ್ಟೆಂಟ್ ಕೋಚ್​ ಎಕಾಪೊಲ್​ ಚಾಂತವಾಂಗ್ ಸಹ ತನ್ನ ಪಾಲಕರಿಗೆ ಪತ್ರ ಬರೆದಿದ್ದ. ಅದರಲ್ಲಿ ಆತ ಎಲ್ಲರ ಕ್ಷಮೆಯಾಚಿಸಿದ್ದ. ಮಕ್ಕಳ ದುಃಸ್ಥಿತಿಯನ್ನು ಪ್ರಸ್ತಾಪಿಸುತ್ತಾ ಆಮ್​ ಸಾರಿ. ಆದರೂ ಮಕ್ಕಳ ದೇಖರೇಖಿಯನ್ನು ನನ್ನ ಶಕ್ತಿಮೀರಿ ನೋಡಿಕೊಳ್ಳುತ್ತಿದ್ದೇನೆ ಎಂದಿದ್ದ.
ಆದರೆ ಅದಕ್ಕೆ ಮಾರುತ್ತರ ಬರೆದಿದ್ದ ಆತನ ಅಜ್ಜಿ.. ಛೆ ಅಂಥಾದ್ದೇನೂ ಆಗಿಲ್ಲ ಮಗಾ. ಏನೋ ತಿಳಿಯದೇ ತಪ್ಪು ನಡೆದಿದೆ. ನಾವು ಯಾರೂ ನಿನ್ನನ್ನು ಬ್ಲೇಮ್​ ಮಾಡುವುದಿಲ್ಲ. ಧೈರ್ಯವಾಗಿರು ಎಂದು ತಮ್ಮ ಮನದಾಳದ ಮಾತುಗಳನ್ನು ಪತ್ರದಲ್ಲಿ ಬರೆದಿದ್ದರು.