ಥಾಯ್ಲೆಂಡ್​ ಗುಹೆಯಿಂದ ಐದನೇ ಬಾಲಕ ಯಶಸ್ವಿಯಾಗಿ ಹೊರಕ್ಕೆ

ಚಿಯಾಂಗ್​ ರೈ (ಥಾಯ್ಲೆಂಡ್): ಇಲ್ಲಿನ ಗುಹೆಯಲ್ಲಿ 17 ದಿನಗಳಿಂದ ವನವಾಸ ಅನುಭವಿಸಿದ್ದ ವೈಲ್ಡ್ ಬೋರ್​ ತಂಡದ 14 ಮಂದಿಯ ಪೈಕಿ ನಿನ್ನೆ 4 ಬಾಲಕರನ್ನು ರಕ್ಷಿಸಲಾಗಿದ್ದು, ಇಂದು 5ನೇ ಬಾಲಕನನ್ನು ರಕ್ಷಿಸಲಾಗಿದೆ ಎಂದು ರಾಯ್ಟರ್ಸ್​ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಕ್ಷರಶಃ ಸಾವಿನ ದವಡೆಯಿಂದ ತಂಡದ ಅಷ್ಟೂ ಬಾಲಕರನ್ನು ಒಬ್ಬೊಬ್ಬರಾಗಿ ಹೊರತರಲಾಗುತ್ತಿದ್ದು, ಇಂದು ಐದನೆಯ ಬಾಲಕನನ್ನು ಹೊರತರಲಾಗಿದೆ. ಮೂವರು ಡೈವರ್​/ಸ್ವಿಮ್ಮರ್​ಗಳ ಕಟ್ಟೆಚ್ಚರದಲ್ಲಿ ಹೊರಬಂದ ಬಾಲಕನನ್ನು ತಕ್ಷಣ ಆ್ಯಂಬುಲೆನ್ಸ್​ನಲ್ಲಿ ಬೆಟ್ಟ ಪ್ರದೇಶದಿಂದ ದೂರಕ್ಕೆ ಕರೆತಂದು, ಏರ್​ ಲಿಫ್ಟ್​ ಮಾಡಿ ಚಿಯಾಂಗ್​ ರೈ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಕೆಲವೇ ಕ್ಷಣಗಳಲ್ಲಿ ಆತ, ಇದಕ್ಕೂ ಮುಂಚೆ ಆಸ್ಪತ್ರೆಗೆ ಬಂದು ಸೇರಿಕೊಂಡಿರುವ ಅವನ ಸಹಪಾಠಿಗಳನ್ನು ಸೇರಿಕೊಳ್ಳಲಿದ್ದಾನೆ.
ಗಮನಾರ್ಹವೆಂದರೆ ಇದುವರೆಗೂ ಪಾರು ಮಾಡಲಾಗಿರುವ ಬಾಲಕರ ಹೆಸರುಗಳನ್ನ ಥಾಯ್​ ನೇವಿ ಸೀಲ್​ ರಕ್ಷಣಾ ತಂಡ ಬಹಿರಂಗಪಡಿಸಿಲ್ಲ. ಮತ್ತು ಆ ಬಾಲಕರನ್ನು ಅವರ ಪೋಷಕರ ಜೊತೆ ಬಿಟ್ಟಿಲ್ಲ. ರಕ್ಷಿಸಲಾದ ಬಾಲಕರನ್ನ ತೀವ್ರ ನಿಗಾ ಘಟಕದಲ್ಲಿಡಲಾಗಿದ್ದು, ಸಾಮಾನ್ಯ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳಿಗೆ ಸೋಂಕು ತಗುಲಬಾರದು ಎಂಬ ಉದ್ದೇಶದಿಂದ ಪೋಷಕರ ಜತೆ ಮಕ್ಕಳ ಭೇಟಿಗೆ ಅವಕಾಶ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಮನಾರ್ಹವೆಂದರೆ ತಮ್ಮ ಮಕ್ಕಳು ಸಾವಿನ ದವಡೆಯಿಂದ ಒಬ್ಬೊಬ್ಬರಾಗಿ ಹೊರಬರುತ್ತಿರುವುನ್ನು ಕಂಡು ಗುಹೆಯ ಎಂಟ್ರನ್ಸ್​ನಲ್ಲಿ ಏಳೆಂಟು ದಿನಗಳಿಂದ ಬೀಡುಬಿಟ್ಟಿರುವ ಬಾಲಕರ ಪೋಷಕರು ಅತೀವವಾಗಿ ಸಂತಸಗೊಂಡಿದ್ದಾರೆ. ತಮ್ಮ ಸಂತೋಷಕ್ಕೆ ಪಾರವೇ ಇಲ್ಲವೆಂಬಂತೆ ಕುಣಿದಾಡುತ್ತಿದ್ದಾರೆ.  ಹೊರಬಂದ ಬಾಲಕ ತಮ್ಮದೇ ಇರಬಹುದಾ? ಎಂದು ಆಸೆ ಕಂಗಳಿಂದ ನೋಡುತ್ತಿದ್ದಾರಾದರೂ, ರಕ್ಷಣಾ ಪಡೆ ಅವರ ಭೇಟಿಗೆ ಅವಕಾಶ ನೀಡಿಲ್ಲ.

ಎಲ್ಲ ಮಕ್ಕಳು ಹೊರಬಂದ ನಂತರ.. ಮೂರ್ನಾಲ್ಕು ದಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಿ, ಹೊರಜಗತ್ತಿಗೆ ಸ್ವಲ್ಪ ಹೊಂದಿಕೊಂಡನಂತರ ಪಾಲಕರೊಂದಿಗೆ ಆ ಮಕ್ಕಳನ್ನು ಭೇಟಿ ಮಾಡಿಸುವ ಬಗ್ಗೆ/ ಅಥವಾ ಅವರ ಸುಪರ್ದಿಗೆ ಒಪ್ಪಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಆಸ್ಪತ್ರೆಯಲ್ಲಿರುವ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.