ಉಗ್ರರ ದಾಳಿ: ಇಬ್ಬರು ಪೊಲೀಸರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಕೋರ್ಟ್‌ ಸಂಕೀರ್ಣದ ಮೇಲೆ ಮಂಗಳವಾರ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಪೊಲೀಸ್‌ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಹಾಗೂ ಆರು ಮಂದಿ ಗಾಯಗೊಂಡಿದ್ದಾರೆ.

ಕೋರ್ಟ್​ ಆವರಣದೊಳಗೆ ನುಗ್ಗಿದ ಉಗ್ರರು ನಡೆಸಿದ ಏಕಾಏಕಿ ಗುಂಡಿನ ದಾಳಿಗೆ ಭದ್ರತಾ ಚೌಕಿಯಲ್ಲಿ ಕಾವಲು ಕಾಯುತ್ತಿದ್ದ ಇಬ್ಬರು ಪೊಲೀಸ್​ ಅಧಿಕಾರಿಗಳಾದ ಗುಲಾಮ್​​ ರಸೂಲ್​​ ಲೋನ್​ ಹಾಗೂ ಗುಲಾಮ್​​ ಹಸನ್​ ವಾಘೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೋರ್ಟ್‌ ಆವರಣ ಸುತ್ತ ಕಟ್ಟೆಚ್ಚರ ವಹಿಸಿದ್ದು, ಉಗ್ರರ ವಿರುದ್ಧ ಸೇನೆ ಕಾರ್ಯಾಚರಣೆ ಮುಂದುವರಿಸಿದೆ.
ಅನಂತ್‌ನಾಗ್ ಜಿಲ್ಲೆಯ ಜಂಗ್ಲಾಟ್ ಮಂಡಿಯಲ್ಲಿರುವ ಕೇಂದ್ರೀಯ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಶಿಬಿರದ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಐದು ಮಂದಿ ಸಿಆರ್‌ಪಿಎಫ್‌ ಯೋಧರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳು ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟಕ ನಿಷ್ಕ್ರಿಯಗೊಳಿಸಿದ ಭದ್ರತಾ ಪಡೆ
ಪುಲ್ವಾಮಾ ಜಿಲ್ಲೆಯ ಆವಂತಿಪುರದಲ್ಲಿ ಉಗ್ರರು ಇಟ್ಟಿದ್ದ ಕಚ್ಚಾ ಬಾಂಬ್‌ಗಳನ್ನು (ಐಇಡಿ) ಭದ್ರತಾ ಪಡೆ ಮಂಗಳವಾರ ಪತ್ತೆ ಹಚ್ಚಿ, ನಿಷ್ಕ್ರಿಯಗೊಳಿಸಿದೆ. ಈ ಮೂಲಕ ಸಂಭವಿಸಬಹುದಾಗಿದ್ದ ದುರಂತವನ್ನು ತಪ್ಪಿಸಿದೆ ಅಂತಾ ಪೊಲೀಸ್‌ ಮೂಲಗಳು ತಿಳಿಸಿವೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv