ದೇವಸ್ಥಾನದ ಬೀಗ ಮುರಿದು ಕಳ್ಳತನ

ಬೆಂಗಳೂರು: ದೇವಸ್ಥಾನದ ಬೀಗ ಮುರಿದು ದೇವರ ಹುಂಡಿ ಹಾಗೂ ಬೆಳ್ಳಿ ಆಭರಣಗಳನ್ನು ಕದ್ದೊಯ್ದ ಘಟನೆ ಆನೇಕಲ್ ತಾಲೂಕಿನ ಸೋಲುರು ಗ್ರಾಮದ ಸೋಮೇಶ್ವರ ದೇವಾಲಯದಲ್ಲಿ ನಡೆದಿದೆ. ಇತ್ತೀಚೆಗಷ್ಟೇ ಈ ದೇವಾಲಯ ಜೀರ್ಣೋದ್ದಾರಗೊಂಡಿತ್ತು ಎನ್ನಲಾಗಿದೆ. ಈ ವೇಳೆ ಕುಂಭಾಭಿಷೇಕದ ಸಮಯದಲ್ಲಿ ಹುಂಡಿಯಲ್ಲಿ ಅಪಾರ ಹಣ ಸಂಗ್ರಹಣೆಯಾಗಿತ್ತು. ಸುಮಾರು 1 ಲಕ್ಷ ರೂಪಾಯಿಗೂ ಹೆಚ್ಚಿನ ಹಣ ಹುಂಡಿಯಲ್ಲಿತ್ತು ಎನ್ನಲಾಗಿದೆ. ಕಳ್ಳತನ ಮಾಡಿದ ಬಳಿಕ ಹುಂಡಿಯನ್ನು ದೇವಸ್ಥಾನದಿಂದ 100 ಮೀಟರ್ ದೂರದಲ್ಲಿ ಎಸೆದಿದ್ದಾರೆ. ಈ ಸಂಬಂಧ ಆನೇಕಲ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.