ಶಿವನ ಮುಂದೆ ನಂದಿಯಂತೆ ಬಂದು ಕುಳಿತ ಬಸವ!

ಚಾಮರಾಜನಗರ: ಗುಂಡ್ಲುಪೇಟೆಯ ಪುರಾತನ ಶ್ರೀ ರಾಮೇಶ್ವರ ದೇವಾಲಯದಲ್ಲಿ ಹೋಳಿ ಹುಣ್ಣಿಮೆಯ ದಿನ ಪೂಜೆಗಾಗಿ ಬಂದಿದ್ದ ಭಕ್ತರಿಗೆ ಒಂದು ವಿಸ್ಮಯಕಾರಿ ದೃಶ್ಯ ನೋಡಲು ಸಿಕ್ಕಿತ್ತು. 
ಅದೆಲ್ಲಿಂದಲೋ ಬಂದು ದೇವಾಲಯದ ಒಳ ಪ್ರವೇಶಿಸಿದ್ದ ಬಸವ ಥೇಟ್‌ ನಂದಿಯಂತೆ ಗಂಟೆಗೂ ಹೆಚ್ಚು ಕಾಲ ಶಿವನ ಮುಂದೆಯೇ ಕುಳಿತು ಅಚ್ಚರಿ ಮೂಡಿಸಿತ್ತು.
ದೇವಾಲಯದ ಒಳಗೆ ಗರ್ಭಗುಡಿಯ ಎದುರಿಗೆ ಕುಳಿತ ಬಸವ, ತದೇಕಚಿತ್ತದಿಂದ ಶಿವಲಿಂಗವನ್ನೇ ನೋಡುತ್ತಾ ತಲ್ಲೀನವಾಗಿತ್ತು. ಯಾರೆ ಬಂದು ಎಬ್ಬಿಸಿದರೂ ಸ್ಥಳದಿಂದ ಕದಲದೇ ಶಿವನ ಮುಂದೆ ಥೇಟ್‌ ನಂದಿ ಕುಳಿತಂತೆ ಕುಳಿತೇ ಇತ್ತು.
ವಿಶೇಷ ಅಂದ್ರೆ ದೇವಾಲಯದೊಳಗೂ ಗರ್ಭಗುಡಿಯ ಎದುರಿಗೆ ನಂದಿ ವಿಗ್ರಹವಿದೆ. ಅದರ ಪಕ್ಕದಲ್ಲೇ ಪವಡಿಸಿದ್ದ ಬಸವ, ತಾನೇ ನಂದಿ ಅನ್ನೋ ಹಾಗೆ ಫೋಸು ಕೊಟ್ಟಿತ್ತು. ಈ ವೇಳೆ ದೇವಾಲಯಕ್ಕೆ ಬಂದ ಭಕ್ತರಿಗೂ, ಸಾಕ್ಷಾತ್ ನಂದಿಯೇ ಬಂದು ಕುಳಿತಂತೆ ಭಾಸವಾಗಿ, ಹಲವರು ಬಸವನನ್ನ ಮೈ ಮುಟ್ಟಿ ನಮಸ್ಕಾರ ಮಾಡಿಕೊಂಡರು.

ಪೂಜೆ ಮಾಡೋವರೆಗೂ ಕದಲದ ಬಸವ

ಗಂಟೆಗೂ ಹೆಚ್ಚು ಕಾಲ ಕಳೆದರೂ ಬಸವ ಎದ್ದೇಳದೇ ಇದ್ದಾಗ, ಅರ್ಚಕರಿಗೂ ವಿಚಿತ್ರ ಎನಿಸಿದೆ. ಬಾಲ ಹಿಡಿದು, ತಟ್ಟಿ ಎಬ್ಬಿಸಲು ನಡೆಸಿದ ಪ್ರಯತ್ನವೂ ವಿಫಲವಾಗಿದೆ. ಕಡೆಗೆ ಅರ್ಚಕರೂ ಶಿವನ ಮೊರೆ ಹೋಗಿದ್ದಾರೆ. ವಿಶೇಷವಾಗಿ ಬಸವನ ಎದುರಿಗೇನೇ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಮೇಲಷ್ಟೇ, ಮಲಗಿದ್ದ ಬಸವ ತನ್ನ ಪಾಡಿಗೆ ಅಲ್ಲಿಂದ ಎದ್ದು ಕದಲಿತ್ತು. ಹೋಳಿ ಹುಣ್ಣಿಮೆ ದಿನವೇ ದೇವಾಲಯಕ್ಕೆ ಬಂದ ಬಸವ ತೋರಿದ ಈ ವಿಚಿತ್ರ ವರ್ತನೆ ದೇವಾಲಯದಲ್ಲಿದ್ದ ಪ್ರತಿ ಭಕ್ತರನ್ನೂ ಆಶ್ಚರ್ಯಚಕಿತಗೊಳಿಸಿದೆ.

Leave a Reply

Your email address will not be published. Required fields are marked *