ಲಂಚ್​ಗೆ ಒಂದ್​ ಪಕ್ಷ, ಡಿನ್ನರ್​ಗೆ ಇನ್ನೊಂದ್ ಪಕ್ಷ..!

ಹೈದ್ರಾಬಾದ್​​: ರಾಜಕಾರಣದಲ್ಲಿ ಪಕ್ಷ ಬದಲಾಯಿಸೋ ಜಂಪಿಂಗ್​ ಸ್ಟಾರ್ಸ್ ಇದ್ದೇ ಇರ್ತಾರೆ. ಆದರೆ ಬ್ರೇಕ್​ಫಾಸ್ಟ್​ ಟೈಮಲ್ಲಿ ಒಂದ್ ಪಕ್ಷ, ಊಟದ ಹೊತ್ತಿಗೆ ಇನ್ನೊಂದ್ ಪಕ್ಷ, ಹಾಗೆ ಡಿನ್ನರ್​ ಟೈಮಲ್ಲಿ ಮತ್ತೆ ಮೊದಲಿದ್ದ ಪಕ್ಷಕ್ಕೆ ಪುನಃ​ ವಾಪಸ್​​ ಆಗಿ ತೆಲಂಗಾಣದ ಮಹಿಳೆಯೊಬ್ಬರು ಸುದ್ದಿಯಾಗಿದ್ದಾರೆ.

ಕಾಂಗ್ರೆಸ್​ ನಾಯಕ ಹಾಗೂ ಈ ಹಿಂದೆ ಆಂಧ್ರಪ್ರದೇಶದ ಡಿಸಿಎಂ ಆಗಿದ್ದ ದಾಮೋದರ್​ ರಾಜನರಸಿಂಹ ಅವರ ಪತ್ನಿ ಪದ್ಮಿನಿ ರೆಡ್ಡಿ, ಕಾಂಗ್ರೆಸ್​ ತೊರೆದು ಬಿಜೆಪಿಗೆ  ಸೇರಿದ ಕೆಲವೇ ಗಂಟೆಯಲ್ಲೇ ಕಾಂಗ್ರೆಸ್​ ಪಕ್ಷಕ್ಕೆ ಮರಳಿದ್ದಾರೆ.

ಪದ್ಮಿನಿ ರೆಡ್ಡಿ ನಿನ್ನೆ ಮಧ್ಯಾಹ್ನ, ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಲಕ್ಷ್ಮಣ್​ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿ. ಮುರಳಿಧರ್​ ರಾವ್​ ನೇತೃತ್ವದಲ್ಲಿ ಬಿಜೆಪಿ ಸೇರಿದ್ದರು. ಅವರ ನಿರ್ಧಾರದ ವಿರುದ್ಧ ಕಾಂಗ್ರೆಸ್​ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಟಿಕೆಟ್​ ಸಿಗಲ್ಲ ಎಂಬ ಕಾರಣಕ್ಕೆ ಬಿಜೆಪಿಗೆ ಸೇರಿದ್ದಾರೆ ಅನ್ನೋ ಮಾತುಗಳು ಸಹ ಕೇಳಿ ಬಂದಿತ್ತು. ಕಾರ್ಯಕರ್ತರ ಆಕ್ರೋಶದ ಬಳಿಕ ಎಚ್ಚೆತ್ತ ಪದ್ಮಿನಿ ರೆಡ್ಡಿ ಮತ್ತೆ ಕಾಂಗ್ರೆಸ್​ ಪಕ್ಷಕ್ಕೆ ಮರಳಿದ್ದಾರೆ.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಬಿಜೆಪಿ ಸೇರಿದ್ದಕ್ಕೆ ಕಾರ್ಯಕರ್ತರು ನೊಂದಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಅಭಿಮಾನಿಗಳಿಗೆ ನೋವಾಗುತ್ತದೆಯೆಂದು ನಾನು ಭಾವಿಸಿರಲಿಲ್ಲ. ಕಾರ್ಯಕರ್ತರ ನೋವನ್ನ ಭರಿಸುವ ಶಕ್ತಿ ನನ್ನಲ್ಲಿಲ್ಲ. ಹೀಗಾಗಿ ನಾನು ಕಾಂಗ್ರೆಸ್​ ಪಕ್ಷಕ್ಕೆ ವಾಪಸ್ಸಾಗುತ್ತಿದ್ದೇನೆಂದು​ ಪದ್ಮಿನಿ ರೆಡ್ಡಿ ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv