ಕತ್ತಿಕಾಯಿ ನೊರೆ ತಂದ ಆಪತ್ತು: ಬೈಕ್​ ಸ್ಕಿಡ್ ಆಗಿ, ಬಸ್ ಅಡಿ ಸಿಲುಕಿ ಟೆಕ್ಕಿ ಸಾವು..!

ಬೆಂಗಳೂರು: ಕತ್ತಿಕಾಯಿಯ ನೊರೆಯಿಂದ ಬೈಕ್​ ಸ್ಕಿಡ್​ ಆಗಿ, ಸಾಫ್ಟ್​ವೇರ್ ಎಂಜಿನಿಯರ್ ಮೃತಪಟ್ಟಿರುವ ಘಟನೆ ಇಂದಿರಾನಗರದ 100 ಅಡಿ ರಸ್ತೆಯಲ್ಲಿ ನಡೆದಿದೆ. ತಮಿಳುನಾಡು ಮೂಲದ ಟೆಕ್ಕಿ ಸೀತಾನಾಥನ್ ಮೃತ ದುರ್ದೈವಿ. ನಿನ್ನೆ ಸಂಜೆ ಮಳೆಯಾದ ಹಿನ್ನೆಲೆಯಲ್ಲಿ ರಸ್ತೆ ಬದಿ ಇದ್ದ ಮರದಿಂದ ಕತ್ತಿಕಾಯಿ ಉದುರಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮಳೆ ಬಂದಿದ್ದ ಕಾರಣ ಕತ್ತಿ ಕಾಯಿಂದ ನೊರೆ ಉಂಟಾಗಿತ್ತು. ಟೆಕ್ಕಿ ಸೀತಾನಾಥನ್ ಅದೇ ರಸ್ತೆಯಲ್ಲಿ ಬೈಕ್​ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ನೊರೆಯ ಕಾರಣ ಬೈಕ್​ ಸ್ಕಿಡ್​ ಆಗಿ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಬಿಎಂಟಿಸಿ ಬಸ್​ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಸೀತಾನಾಥನ್ ಬಾಗ್ಮನೆ ಟೆಕ್ ಪಾರ್ಕ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಪ್ರತಿ ದಿನವೂ ಇದೇ ಮಾರ್ಗವಾಗಿ ತೆರಳುತ್ತಿದ್ದರು.

ಇಂದಿರಾನಗರದ 100 ಫೀಟ್​ ರಸ್ತೆಯಲ್ಲಿ ಅಧಿಕವಾದ ಕತ್ತಿಕಾಯಿ ಮರಗಳು ಇರೋದ್ರಿಂದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಕಾಯಿಗಳ ನೊರೆಯಿಂದ ಬ್ರೇಕ್ ಹಾಕುವ ಸಂದರ್ಭದಲ್ಲಿ ಅಪಘಾತ ಸಂಭವಿಸುತ್ತಿದೆ. ಘಟನೆ ಸಂಬಂಧ ಹಲಸೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಎಂಟಿಸಿ ಚಾಲಕನನ್ನ  ಪೊಲೀಸರು ವಶಕ್ಕೆ ಪಡೆದಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv