ಮೋದಿ ಸಮಾವೇಶದಲ್ಲಿ ತೇಜಸ್ವಿ ಸೂರ್ಯ ಯಡವಟ್ಟು, ಹೈಕಮಾಂಡ್​ಗೆ ಕಂಪ್ಲೆಂಟ್​..!

ಬೆಂಗಳೂರು: ಇಲ್ಲಿನ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ, ಸ್ಥಳೀಯ ಬಿಜೆಪಿ ಶಾಸಕರನ್ನ ಸರಿಯಾಗಿ ವಿಶ್ವಾಸಕ್ಕೆ ತೆಗೆದುಕೊಳ್ತಿಲ್ಲ ಅನ್ನೋ ಆಪಾದನೆಗಳ ನಡುವೆ ಮತ್ತೊಂದು ಯಡವಟ್ಟು ಮಾಡ್ಕೊಂಡಿದ್ದಾರೆ. ಅದೂ ಕೂಡ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ..!

ಹೌದು, ಏಪ್ರಿಲ್ 13 ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಲ್ಲಿ ನಡೆದ ‘ವಿಜಯ ಸಂಕಲ್ಪ’ ಯಾತ್ರೆಯಲ್ಲಿ ಭಾಗಿಯಾಗಿದ್ದರು. ಅರಮನೆ ಮೈದಾನದಲ್ಲಿ ನಡೆದ ಅದ್ದೂರಿ ಸಮಾವೇಶಕ್ಕೆ ಪ್ರಧಾನಿ ಮೋದಿ, ಆಗಮಿಸುವ ಮುನ್ನವೇ ಯಡವಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಅಂದ್ಹಾಗೆ ತೇಜಸ್ವಿ ಸೂರ್ಯ, ಸಮಾವೇಶಕ್ಕೆ ಬರುವಂತೆ ಬಸವನಗುಡಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಸುಮಾರು 1000 ವಿಐಪಿ ಪಾಸ್‌ಗಳನ್ನು ನೀಡಿದ್ದರು. ಒಂದು ಪಾಸ್‌ನಲ್ಲಿ ಇಬ್ಬರು ಕಾರ್ಯಕರ್ತರು ಸಮಾವೇಶದ ವೇದಿಕೆಗೆ ಪ್ರವೇಶಿಸಲು ಅನುಮತಿ ಇತ್ತು. ಪಾಸ್​ ನೀಡಿ ಸಮಾವೇಶಕ್ಕೆ ಬರುವಂತೆ ಆಹ್ವಾನಿಸುವುದರ ಜೊತೆಗೆ ತನ್ನ ಕಾರ್ಯಕರ್ತರಿಗೆ ಕೆಲವು ಷರತ್ತುಗಳನ್ನೂ ವಿಧಿಸಿದ್ದರು ಎನ್ನಲಾಗಿದೆ.

ಅದೇನಂದರೆ ಸಮಾವೇಶಕ್ಕೆ ಬರುವವರು, ನಾನು ವೇದಿಕೆಯಲ್ಲಿ ಮಾತನ್ನಾಡುವಾಗ ನನ್ನ ಹೆಸರನ್ನ ಕೂಗಬೇಕು. ನೀವು ಕೂಗುವ ಘೋಷಣೆ ದೆಹಲಿಗೆ ಕೇಳಿಸಬೇಕು. ನನಗೆ ಮತದಾರರ ಸಂಪೂರ್ಣ ಬೆಂಬಲವಿದೆ ಎಂಬ ಸಂದೇಶ ರವಾನೆ ಆಗಬೇಕು. ನೀವು ವೇದಿಕೆಯ ಹತ್ತಿರವೇ ಕುಳಿತು ನನ್ನ ಹೆಸರನ್ನು ಕೂಗಬೇಕು ಎಂದು ಸೂಚಿಸಿದ್ದರು ಎನ್ನಲಾಗಿದೆ.

ತೇಜಸ್ವಿ ಸೂರ್ಯರ ಮಾತಿನ ಪ್ರಕಾರವೇ ಬಸವನಗುಡಿಯ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಬಸವನಗುಡಿ ಬಿಜೆಪಿ ಕಾರ್ಯಕರ್ತರ ಘೋಷಣೆ, ರಾಜ್ಯ ಬಿಜೆಪಿ ಮುಖಂಡರನ್ನ ಕೆರಳಿಸಿದೆ. ಅಲ್ಲದೇ ಅದೇ ವೇದಿಕೆಯಲ್ಲಿ ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ್, ಡಿ.ವಿ. ಸದಾನಂದಗೌಡ, ಪಿ.ಸಿ.ಮೋಹನ್, ‌ವಿ.ಸೋಮಣ್ಣ, ಡಾ. ತೇಜಸ್ವಿನಿ ಅನಂತಕುಮಾರ್ ಕೂಡ ಇದ್ದರು. ವೇದಿಕೆ ಮೇಲಿದ್ದ ನಾಯಕರಿಗೆ ಇರಿಸುಮುರಿಸು ಕೂಡ ಉಂಟಾಗಿದೆ.

ನರೇಂದ್ರ ಮೋದಿ ವೇದಿಕೆಗೆ ಆಗಮಿಸುವ ಮುನ್ನ ತೇಜಸ್ವಿ ಸೂರ್ಯ ಮಾತನಾಡಲು ಮುಂದಾದರು. ವೇದಿಕೆಗೆ ಸೂರ್ಯ ಬರುತ್ತಿದ್ದಂತೆ ಕಾರ್ಯಕರ್ತರು ಅವ್ರ ಹೆಸ್ರು ಕೂಗಿದ್ದಾರೆ. ಅಲ್ಲದೇ ಭಾಷಣದ ಮಧ್ಯೆಯೂ ಸೂರ್ಯ, ಸೂರ್ಯ ಎಂದು ಘೋಷಣೆ ಕೂಗಿದ್ದಾರೆ.

ಬಸವನಗುಡಿ ಕಾರ್ಯಕರ್ತರ ಈ ನಡವಳಿಕೆಯಿಂದ ಬಿಜೆಪಿ ಮುಖಂಡರು ಅಸಮಾಧಾನಗೊಂಡಿದ್ದಾರೆ. ತೇಜಸ್ವಿ ಸೂರ್ಯರ ಸೂಚನೆಯಂತೆ ಇದೆಲ್ಲಾ ನಡೆದಿದೆ ಅನ್ನೋದನ್ನ ಬಿಜೆಪಿ ಮುಖಂಡರು ಅರಿತುಕೊಂಡಿದ್ದಾರೆ. ಮೋದಿ ಆಗಮಿಸುವ ವೇಳೆ ಮಾಮೂಲಿಯಂತೆ ಮೋದಿ, ಮೋದಿ ಅಂತಾ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಅದು ಬಿಟ್ಟು ಮೊನ್ನೆ ನಡೆದ ಸಮಾವೇಶದಲ್ಲಿ ತೇಜಸ್ವಿ ಸೂರ್ಯ ಅವ್ರ ಹೆಸರು ಕೂಗಿದ್ದಾರೆ. ಮೋದಿಯನ್ನ ಹೊರತಪಡಿಸಿಯೂ ಹಿರಿಯ ನಾಯಕರು ವೇದಿಕೆ ಮೇಲೆ ಇರುವಾಗ ಬಸವನಗುಡಿ ಕಾರ್ಯಕರ್ತರು ತೇಜಸ್ವಿ ಹೆಸರನ್ನ ಕೂಗಿದ್ದಾರೆ. ಪ್ರಧಾನಿ ಮೋದಿ ಅವರನ್ನ ಬಿಟ್ಟರೇ ತೇಜಸ್ವಿ ಸೂರ್ಯ ಅವರೇ ದೊಡ್ಡವರಾ ಅಂತಾ ಉಳಿದ ಬಿಜೆಪಿ ನಾಯಕರು ಅಸಮಾಧಾನಗೊಂಡಿದ್ದಾರೆ. ಅಲ್ಲದೇ ಈ ವಿಚಾರವನ್ನ ಹೈಕಮಾಂಡ್​​ಗೂ ಮುಟ್ಟಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ವರದಿ: ಮಧುಸೂಧನ್


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv