ಕಂಗಾಲಾದ ತೇಜಸ್ವಿ ಸೂರ್ಯ, ಪ್ರಚಾರಕ್ಕಿಳಿಯದ ನಾಯಕರ ವಿರುದ್ಧ ಕಂಪ್ಲೆಂಟ್​​..!

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಬಿಜೆಪಿಯ ತೇಜಸ್ವಿ ಸೂರ್ಯಗೆ ತಮ್ಮ ವ್ಯಾಪ್ತಿಗೆ ಬರುವ ಶಾಸಕರನ್ನ ಒಗ್ಗೂಡಿಸೋದೇ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಆತಂಕಗೊಂಡಿರುವ ಅವರು, ಬಿಜೆಪಿ ಸಹ-ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್​ಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ತೇಜಸ್ವಿ ಸೂರ್ಯ ಆರಂಭದಲ್ಲಿ ತಮ್ಮನ್ನ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಅಂತಾ ಅಸಮಾಧಾನ ವ್ಯಕ್ತಪಡಿಸಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ನಾಲ್ವರು ಬಿಜೆಪಿ ಶಾಸಕರು ಇದುವರೆಗೂ ಸರಿಯಾಗಿ ಪ್ರಚಾರವನ್ನೇ ನಡೆಸಿಲ್ಲ ಎನ್ನಲಾಗಿದೆ. ಶಾಸಕರಾದ ಆರ್.ಅಶೋಕ್, ವಿ.ಸೋಮಣ್ಣ, ಸತೀಶ್ ರೆಡ್ಡಿ ಹಾಗೂ ಉದಯ್ ಗರುಡಾಚಾರ್‌ ಇದುವರೆಗೂ ಸರಿಯಾಗಿ ಪ್ರಚಾರ ನಡೆಸಿಲ್ಲ. ಕೇವಲ ಬಸವನಗುಡಿ ಕ್ಷೇತ್ರದ ಶಾಸಕ ರವಿಸುಬ್ರಮಣ್ಯ ಮಾತ್ರ ತೇಜಸ್ವಿ ಸೂರ್ಯ ಪರ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಇನ್ನು, ತೇಜಸ್ವಿ ಸೂರ್ಯರ ಮೇಲೆ ಮುನಿಸಿಕೊಂಡಿರುವ ಬಿಜೆಪಿ ಶಾಸಕರು, ಕೇವಲ ಒಂದೊಂದು ದಿನ ಮಾತ್ರ ಪ್ರಚಾರಕ್ಕೆ ತೆರಳಿ ಸುಮ್ಮನಾಗಿದ್ದಾರೆ.

ಹೇಗಾದರೂ ಮಾಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇನೆ ಎಂದಿದ್ದ ತೇಜಸ್ವಿ ಸೂರ್ಯ, ಈಗ ಕಂಗಾಲಾಗಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಆರ್​ ಅಶೋಕ್​​, ವಿ.ಸೋಮಣ್ಣ, ಸತೀಶ್​ ರೆಡ್ಡಿ, ಉದಯ್​​ ಗರುಡಾಚಾರ್​​ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ತೇಜಸ್ವಿ ಸೂರ್ಯ, ಬಿಜೆಪಿ ಸಹ-ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್​ಗೆ ದೂರು ನೀಡಿದ್ದಾರೆ.

ಬಿಜೆಪಿ ಹೈಕಮಾಂಡ್​​ ತಮ್ಮನ್ನ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುತ್ತಿದ್ದಂತೆ, ಕ್ಷೇತ್ರದಲ್ಲಿ ಯಾವೆಲ್ಲಾ ಬದಲಾವಣೆಗಳು ಆದವು. ಯಾವೆಲ್ಲಾ ಬಿಜೆಪಿ ಶಾಸಕರು ತಮಗೆ ಬೆಂಬಲ ಸೂಚಿಸಿದರು. ಸದ್ಯ ಪ್ರಚಾರದಲ್ಲಿ ಆಗುತ್ತಿರೋದೇನು? ಅನ್ನೋದರ ಬಗ್ಗೆ ಸಮಗ್ರ ಮಾಹಿತಿಯನ್ನ ಕೊಟ್ಟಿದ್ದಾರಂತೆ. ತೇಜಸ್ವಿ ಸೂರ್ಯ ಅವರ ದೂರನ್ನ ಆಲಿಸಿರುವ ಬಿ.ಎಲ್​.ಸಂತೋಷ್, ‘ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ ಮುಂದೆ ಹೋಗು. ಮುಂದಿನ ದಿನಗಳಲ್ಲಿ ಅಲ್ಲಿನ ಸ್ಥಳೀಯ ನಾಯಕರನ್ನು ಹೇಗೆ ನಿಭಾಯಿಸಬೇಕೆಂದು ನಾನು ತಿಳಿಸುತ್ತೇನೆ’ ಅಂತಾ ತೇಜಸ್ವಿ ಸೂರ್ಯರಿಗೆ ಅಭಯ ನೀಡಿದ್ದಾರಂತೆ.

ಬಿ.ಎಲ್.ಸಂತೋಷ್‌ ಅವರ ಮಾತಿನಿಂದ ಕೊಂಚ ನಿರಾಳರಾಗಿರುವ ತೇಜಸ್ವಿ ಸೂರ್ಯ, ಬಿರುಸಿನ ಪ್ರಚಾರಕ್ಕಿಳಿದಿದ್ದಾರೆ. ಹೀಗಾಗಿ ಚಿಕ್ಕಪ್ಪ ರವಿ ಸುಬ್ರಮಣ್ಯ ಜೊತೆ ಸೇರಿ ಜೋರಾಗಿ ಪ್ರಚಾರ ನಡೆಸುತ್ತಿದ್ದಾರೆ.

ವಿಶೇಷ ವರದಿ: ಪಿ. ಮಧುಸೂಧನ್


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv