ಫುಟ್​​ಬೋರ್ಡ್​ನಲ್ಲಿ ನಿಲ್ಲುವಾಗ ಎಚ್ಚರ: ಈ ವಿಡಿಯೋ ಪಾಠ ಆಗಲಿ..!

ಮುಂಬೈ: 17 ವರ್ಷದ ಯುವತಿಯೊಬ್ಬಳು ರೈಲಿನಿಂದ ಸ್ಲಿಪ್​ ಆಗಿ ಕೆಳಗೆ ಬಿದ್ದರೂ ಪವಾಡಸದೃಶ ರೀತಿಯಲ್ಲಿ ಪಾರಾದ ಘಟನೆ ಮುಂಬೈನಲ್ಲಿ ನಡೆದಿದೆ. ಫುಟ್​​ಬೋರ್ಡ್​​ನಲ್ಲಿ ನಿಂತಿದ್ದ ಯುವತಿ ಕಾಲು ಜಾರಿ ಕೆಳಗೆ ಬೀಳುತ್ತಿದ್ದಂತೆ ಸಹಪ್ರಯಾಣಿಕರೊಬ್ಬರು ಆಕೆಯ ಟಿ-ಶರ್ಟ್​​ ಹಿಡಿದುಕೊಂಡು ಮೇಲೆಳೆದಿದ್ದಾರೆ. ಈ ದೃಶ್ಯ ಮೊಬೈಲ್​ನಲ್ಲಿ ಸರೆಯಾಗಿದ್ದು ಎದೆ ಝಲ್ಲೆನಿಸುವಂತಿದೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಥಾಣೆ ಜಿಲ್ಲೆಯ ದೀವಾ ನಿವಾಸಿಯಾದ ಯುವತಿ ಕಲ್ಯಾಣ್​​​ಗೆ ಹೊರಟಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ಫುಟ್​​ಬೋರ್ಡ್​​ನಲ್ಲಿದ್ದ ಆಕೆ ಸ್ಲಿಪ್​ ಆಗಿ ರೈಲಿನಿಂದ ಕೆಳಗೆ ಬೀಳುತ್ತಿದ್ದಳು. ಈ ವೇಳೆ ಸಮಯಪ್ರಜ್ಞೆ ಮೆರೆದ ಮತ್ತೊಬ್ಬ ಪ್ರಯಾಣಿಕ ಆಕೆಯ ಟಿ-ಶರ್ಟ್​ ಹಿಡಿದುಕೊಂಡು ಆಕೆ ಟ್ರ್ಯಾಕ್​ ಮೇಲೆ ಬೀಳದಂತೆ ನೋಡಿಕೊಂಡಿದ್ದಾರೆ. ಈ ವೇಳೆ ಪಕ್ಕದ ಟ್ರ್ಯಾಕ್​​ನಲ್ಲಿ ಮತ್ತೊಂದು ರೈಲು ಕೂಡ ಪಾಸ್​ ಆಗಿದೆ. ಕೆಲವು ಸೆಕೆಂಡ್​​ಗಳ ಬಳಿಕ ಇತರೆ ಪ್ರಯಾಣಿಕರು ಸಹಾಯ ಮಾಡಿ ಯುವತಿಯನ್ನ ಬೋಗಿಯೊಳಕ್ಕೆ ಎಳೆದುಕೊಂಡಿದ್ದಾರೆ. ಕ್ಷಣಾರ್ಧದಲ್ಲಿ ನಡೆದ ಈ ಘಟನೆ ನಿಜಕ್ಕೂ ಆತಂಕಪಡಿಸುವಂತಿದೆ.

ಘಾಟ್ಕೋಪರ್​ ಹಾಗೂ ವುಖ್ರೋಲಿ ನಿಲ್ದಾಣಗಳ ನಡುವೆ ಸೋಮವಾರದಂದು ಈ ಘಟನೆ ನಡೆದಿದೆ. ಯುವತಿಯನ್ನು ರಕ್ಷಿಸಿದ ಬಳಿಕ ಆಕೆ ದೀವಾ ನಿಲ್ದಾಣದಲ್ಲಿ ರೈಲಿನಿಂದ ಇಳಿದಿದ್ದಾಳೆ. ಈ ವೇಳೆ ಆಕೆಯ ಕೈನಲ್ಲಿ ರಕ್ತಸ್ರಾವವಾಗ್ತಿದ್ದರಿಂದ ಆಕೆಗೆ ಚಿಕಿತ್ಸೆ ನೀಡಲಾಗಿದೆ. ರೈಲು ಅಷ್ಟೊಂದು ರಶ್​ ಇಲ್ಲದಿದ್ರೂ ಯುವತಿ ಬಾಗಿಲ ಬಳಿ ನಿಂತಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಘಟನೆಯ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಆಕೆಯ ಗುರುತು ಪತ್ತೆಹಚ್ಚಿ ವಿಚಾರಣೆ ನಡೆಸಿದ್ದಾರೆ. ಫೋನಿನಲ್ಲಿ ಮಾತನಾಡುತ್ತಿದ್ದಾಗ ಬ್ಯಾಲೆನ್ಸ್​ ತಪ್ಪಿ ರೈಲಿನಿಂದ ಬಿದ್ದಿದ್ದಾಗಿ ಯುವತಿ ಹೇಳಿದ್ದಾಳೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv