ನೈರುತ್ಯ ಶಿಕ್ಷಕ, ಪದವೀಧರ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಗಳ ಗೆಲುವು ಖಚಿತ: ಪ್ರಸನ್ನಕುಮಾರ್​

ಶಿವಮೊಗ್ಗ: ನೈರುತ್ಯ ಶಿಕ್ಷಕ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಮಂಜುನಾಥ್​ ಸ್ವತಃ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿತುಕೊಂಡಿದ್ದಾರೆ. ಇನ್ನು ಪದವೀಧರ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಎಸ್​​.ಪಿ. ದಿನೇಶ್​ ಸಹ ಉತ್ತಮ ಅಭ್ಯರ್ಥಿಯಾಗಿದ್ದಾರೆ. ಇಬ್ಬರು ಆಯಾ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಅಭ್ಯರ್ಥಿಗಳೆಂದು ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ತೀ.ನಾ. ಶ್ರೀನಿವಾಸ್​ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀನಿವಾಸ್​, ಕಾಂಗ್ರೆಸ್​ ಅಭ್ಯರ್ಥಿಗಳು ಉತ್ತಮ ಕೆಲಸಗಳನ್ನು ಮಾಡಿದ್ದರಿಂದಾಗಿ ಈ ಬಾರಿ ಗೆಲುವು ಸಾಧಿಸಲಿದ್ದಾರೆ. ಬಿಜೆಪಿಯವರು ಕೇವಲ ಮಾತುಗಳಾಡುತ್ತಾರೆ. ಅಭಿವೃದ್ಧಿಯ ಕೆಲಸ ಇಲ್ಲ. ಇನ್ನು, ಬಿಜೆಪಿ ಶಿಕ್ಷಕ ಕ್ಷೇತ್ರದ ಅಭ್ಯರ್ಥಿ ರಾಜ್ಯಸಭೆ ಸದಸ್ಯರಾಗಿದ್ದಾಗ ಶಿಕ್ಷಕ ಹಾಗೂ ಪದವೀಧರರ ಸಮಸ್ಯೆಗೆ ಸ್ಪಂದಿಸಿಲ್ಲ. ಈಗ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಶ್ರೀನಿವಾಸ್​ ಆರೋಪಿಸಿದರು.
ಇನ್ನು ಪದವೀಧರ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಎಸ್​.ಪಿ. ದಿನೇಶ್​​ ಮಾತನಾಡಿ, ಕ್ಷೇತ್ರದ ಬಿಜೆಪಿ ಗೌರವವನ್ನು ವಿಧಾನ ಪರಿಷತ್​ ಸಭಾಪತಿ ಡಿ.ಹೆಚ್​​. ಶಂಕರಮೂರ್ತಿ ಕಾಪಾಡಿಕೊಂಡು ಬಂದಿದ್ದಾರೆ. ಆದ್ರೆ, ಬಿಜೆಪಿ ಪದವೀಧರ ಅಭ್ಯರ್ಥಿ ಕ್ಷೇತ್ರದ ಗೌರವ ಕಳೆದಿದ್ದಾರೆ. ಬಾಡೂಟ ಏರ್ಪಡಿಸುವ ಮೂಲಕ ಪದವೀಧರರ ಮತ ಖರೀದಿಸುವ ಯತ್ನಕ್ಕೆ ಕೈ ಹಾಕಿದ್ದಾರೆ. ದಿಢೀರ್ ಆಗಿ ಶಿಕ್ಷಕರ ಹಾಗೂ ಪದವೀಧರರ ಸಮಸ್ಯೆಗಳು ಈಗ ಬಿಜೆಪಿ ಅಭ್ಯರ್ಥಿಗಳಿಗೆ ನೆನಪಾಗಿದೆ. ಇದು ಅವರ ಕಾಳಜಿಯನ್ನು ತೋರಿಸುತ್ತದೆ. ಕಳೆದ ಒಂದು ವರ್ಷದಿಂದ ನಾನು ಪದವೀಧರರ ಸಂಪರ್ಕದಲ್ಲಿದ್ದೇನೆ. ಹಾಗಾಗಿ ಮತದಾರರು ನನ್ನ ಕೈ ಹಿಡಿಯಲಿದ್ದಾರೆ ಎಂದು ಕಾಂಗ್ರೆಸ್​ ಪದವೀಧರ ಅಭ್ಯರ್ಥಿ ದಿನೇಶ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ಮಾಜಿ ಕಾಂಗ್ರೆಸ್​ ಶಾಸಕ ಕೆ.ಬಿ.ಪ್ರಸನ್ನ ಕುಮಾರ್​ ಮಾತನಾಡಿ, ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ಇಬ್ಬರೂ ಕಾಂಗ್ರೆಸ್​ ಅಭ್ಯರ್ಥಿಗಳು ಸಮರ್ಥರಿದ್ದಾರೆ. ಹಾಗಾಗಿ ಅವರ ಗೆಲುವು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv