18 ಮತಗಟ್ಟೆಗಳಲ್ಲಿ ಮರು ಚುನಾವಣೆ ನಡೆಸಲು ನಾಯ್ಡು ಆಗ್ರಹ

ಅಮರಾವತಿ: ಆಂಧ್ರಪ್ರದೇಶದ 7 ವಿಧಾನಸಭಾ ವ್ಯಾಪ್ತಿಯ 18 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಅವಕಾಶ ಒದಗಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಟಿಡಿಪಿ ಮನವಿ ಮಾಡಿದೆ.

ಸಿಎಂ ಚಂದ್ರಬಾಬು ನಾಯ್ಡು ಕ್ಯಾಬಿನೆಟ್​ ಸಚಿವರು, ಶಾಸಕರನ್ನೊಳಗೊಂಡ ನಿಯೋಗವೊಂದು ಆಂಧ್ರಪ್ರದೇಶ ಮುಖ್ಯ ಕಾರ್ಯದರ್ಶಿ ಎಲ್​.ವಿ.ಸುಬ್ರಹ್ಮಣ್ಯಮ್​ ಅವರನ್ನು ಭೇಟಿ ಮಾಡಿ ಈ ಮನವಿ ಸಲ್ಲಿಸಿದೆ. ವಿಪಕ್ಷವಾಗಿರುವ ಜಗನ್​ಮೋಹನ್​ ರೆಡ್ಡಿ ನೇತೃತ್ವದ ವೈಎಸ್​​ಆರ್​ ಕಾಂಗ್ರೆಸ್​ ಏಪ್ರಿಲ್​ 11ರಂದು ನಡೆದ ಚುನಾವಣೆಯಲ್ಲಿ ಅಕ್ರಮ ಎಸಗಿದೆ. ಹೀಗಾಗಿ 18 ಕ್ಷೇತ್ರಗಳಲ್ಲಿ ಮರು ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಿ ಅಂತಾ ಟಿಡಿಪಿ ಅರ್ಜಿ ಸಲ್ಲಿಸಿದೆ.

ಈ ತಿಂಗಳ ಆರಂಭದಲ್ಲಿ ವೈಎಸ್​ಆರ್​ ಕಾಂಗ್ರೆಸ್ ಶಾಸಕ ಚೆವಿರೆಡ್ಡಿ ಭಾಸ್ಕರರೆಡ್ಡಿ ಕೂಡ ಮರುಮತದಾನಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರು. ಚಿತ್ತೂರು ಜಿಲ್ಲೆಯ ಚಂದ್ರಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕೆಲ ಮತದಾರರಿಗೆ ಹಕ್ಕು ಚಲಾಯಿಸಲು ಸಾಧ್ಯವಾಗಿಲ್ಲ. ಹೀಗಾಗಿ ಮರುಚುನಾವಣೆ ನಡೆಸಿ ಎಂದಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ಚುನಾವಣಾ ಆಯೋಗ, ಮೇ 19ರಂದು 5 ಮತಗಟ್ಟೆಗಳಲ್ಲಿ ಮರುಚುನಾವಣೆ ನಡೆಸುವುದಾಗಿ ಹೇಳಿತ್ತು. ಈ ಬೆನ್ನಲ್ಲೇ ಟಿಡಿಪಿ ಕೂಡ 18 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಅವಕಾಶ ಕಲ್ಪಿಸಲು ಹೇಳಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv