ಇದೇನು ತಹಶೀಲ್ದಾರ್ ಕಚೇರಿಯೋ..? ಸಾರ್ವಜನಿಕ ಶೌಚಾಲಯವೋ..!?​

ರಾಯಚೂರು: ರಾಯಚೂರಿನ ತಹಶೀಲ್ದಾರ್ ಕಚೇರಿಯ ಆವರಣ ಬಯಲು ಶೌಚಾಲಯವಾಗಿ ಮಾರ್ಪಡುತ್ತಿದೆಯಾ ಅನ್ನೋ ಅನುಮಾನ ಜನಸಾಮಾನ್ಯನಲ್ಲಿ ಮೂಡುತ್ತಿದೆ. ಹೌದು, ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಜನರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಕಚೇರಿಯ ಆವರಣದಲ್ಲಿ ಸದಾ ದುರ್ನಾತ ಬೀರುತ್ತಿದೆ. ಪಹಣಿ ಪತ್ರ, ಭೂ-ದಾಖಲೆಗಳು, ಜನನ, ಮರಣ ಪ್ರಮಾಣ ಪತ್ರ, ಆದಾಯ, ಜಾತಿ ಪ್ರಮಾಣ ಪತ್ರ ಹೀಗೆ ಹತ್ತಾರು ಕೆಲಸಗಳಿಗಾಗಿ ದಿನನಿತ್ಯ ರಾಯಚೂರು ತಾಲ್ಲೂಕಿನಿಂದ ನೂರಾರು ಜನರು ತಮ್ಮ ಕೆಲಸ ಕಾರ್ಯಗಳಿಗೆ ಕಚೇರಿಗೆ ಭೇಟಿ ನೀಡುತ್ತಾರೆ.
ಹೀಗೆ ಬರುವ ಜನರಿಗೆ ಕಚೇರಿ ಆವರಣದಲ್ಲಿ ಸೂಕ್ತ ಶೌಚಾಲಯ ಇಲ್ಲದ ಕಾರಣ ಜನರು ಅನಿವಾರ್ಯವಾಗಿ ಗೋಡೆಗಳ ಮೊರೆ ಹೋಗುತ್ತಿದ್ದಾರೆ. ಇನ್ನು ತಹಶೀಲ್ ಕಚೇರಿಯ ಒಳಾಂಗಣದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಆದ್ರೆ ಕಚೇರಿಯ ಸಿಬ್ಬಂದಿಗೆ ಮಾತ್ರ ಆ ಶೌಚಾಲಯ ಬಳಕೆಗೆ ಸಿಮೀತ ಗೊಳಿಸಿರೋದ್ರಿಂದ ಜನರಿಗೆ ಶೌಚಾಲಯ ಬಳಸಲು ಸಾಧ್ಯವಾಗುತ್ತಿಲ್ಲ ಅಂತಾರೆ ಸಾರ್ವಜನಿಕರು.
ಕಚೇರಿಯಲ್ಲಿರುವ ಮಹಿಳಾ ಶೌಚಾಲಯಕ್ಕೆ ಸದಾ ಬೀಗ ಹಾಕಲಾಗಿರುತ್ತದೆ. ಇದರಿಂದ ಕಚೇರಿಗೆ ಬರುವ ಮಹಿಳೆಯರಿಗೆ ಮೂತ್ರ ವಿಸರ್ಜನೆಗೆ ತುಂಬಾ ತೊಂದರೆಯಾಗುತ್ತಿದೆ ಅನ್ನೋದು ಮಹಿಳೆಯರ ಅಳಲು. ಮತ್ತೊಂದೆಡೆ ಹೊರಗಡೆ ಪುರುಷರು ಎಲ್ಲೆಂದರಲ್ಲಿ ಓಪನ್ ಆಗಿ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಕಚೇರಿಯ ಹೊರಾಂಗಣದಲ್ಲಿ ಓಡಾಡಲು ಮಹಿಳೆಯರಿಗೆ ಮುಜುಗರ ಉಂಟಾಗುತ್ತಿದೆ.
ಕಚೇರಿಯ ಹೊರಾಂಗಣದ ಸುತ್ತ ಮುತ್ತಲಿನಲ್ಲಿ ಮುಳ್ಳಿನ ಬೇಲಿಗಳು ಬೆಳೆದು ನಿಂತಿದ್ದು, ಸ್ವಚ್ಛತೆ ಮಾಯವಾಗಿದೆ. ನಿತ್ಯ ತಹಶೀಲ್ದಾರ್ ಕಚೇರಿಗೆ ಬರುವ ಜನರು ಶೌಚಕ್ಕಾಗಿ ಗೋಡೆಗಳಿಗೆ ಮೊರೆ ಹೋಗುತ್ತಿರುವುದನ್ನ ನೋಡಿದ್ರೆ, ಕಚೇರಿ ಆವರಣ ಬಯಲು ಶೌಚಾಲಯದಂತಾಗಿದೆ. ಒಂದೆಡೆ ಕೇಂದ್ರ, ರಾಜ್ಯ ಸರ್ಕಾರಗಳು ಸ್ವಚ್ಛತೆಗಾಗಿ ಕೋಟ್ಯಾಂತರ ಹಣ ಖರ್ಚು ಮಾಡಿ ಸ್ವಚ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಆದ್ರೆ ರಾಯಚೂರಿನ ಸರ್ಕಾರಿ ತಹಶೀಲ್ದಾರ್ ಕಚೇರಿ ಆವರಣದಲ್ಲಿಯೇ ಸೂಕ್ತ ಶೌಚಾಲಯ ಇಲ್ಲದಂತಾಗಿದೆ. ಕಚೇರಿ ಆವರಣದ ಒಂದು ಭಾಗದಲ್ಲಿ ಉತ್ತಮ ಶೌಚಾಲಯ ನಿರ್ಮಿಸಿ ಕೊಟ್ಟರೆ ಅನುಕೂಲವಾಗುತ್ತೆ ಅಂತ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ದಂಡಾಧಿಕಾರಿಗಳು ಈ ಕುರಿತು ಗಮನ ಹರಿಸಬೇಕಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv