ಬ್ರಹ್ಮಗಿರಿ ಬೆಟ್ಟವನ್ನು ಮಹಿಳೆಯರು ಹತ್ತಬಾರದಾ..?

ಕೊಡಗು: ಕಾವೇರಿ ನದಿಯ ಉಗಮಸ್ಥಳ ತಲಕಾವೇರಿಯಲ್ಲಿ ಹೊಸದೊಂದು ವಿವಾದ ಉದ್ಭವವಾಗಿದೆ. ಇಲ್ಲಿನ ಬ್ರಹ್ಮಗಿರಿ ಬೆಟ್ಟಕ್ಕೆ ತೆರಳದಂತೆ‌ ಮಹಿಳೆಯರಿಗೆ ನಿರ್ಬಂಧ ವಿಧಿಸಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಈ ಸಂಬಂಧ ಮಾನವ ಹಕ್ಕು ಆಯೋಗ ಸುಮೋಟೋ ಪ್ರಕರಣ ದಾಖಲಿಸಿಕೊಂಡು ವಿಚಾರಣೆಯನ್ನು ಆರಂಭಿಸಿದ್ದಾರೆ. ಅಲ್ಲದೆ ಈ ಸಂಬಂಧ, ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಗೂ ದೇವಾಲಯ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್​​.ತಮ್ಮಯ್ಯ ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗ ನೋಟಿಸ್ ಜಾರಿ ಮಾಡಿದೆ.

ಇತ್ತೀಚೆಗೆ ತಲಕಾವೇರಿಯಲ್ಲಿ ನಡೆದ ‘ಅಷ್ಟಮಂಗಲ ಪ್ರಶ್ನೆ’ ಬಳಿಕ, ಬ್ರಹ್ಮಗಿರಿ ಬೆಟ್ಟಕ್ಕೆ‌ ತೆರಳದಂತೆ ಮಹಿಳೆಯರಿಗೆ ನಿರ್ಬಂಧ ವಿಧಿಸಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿತ್ತು. ಹೀಗಾಗಿ, ಪತ್ರಿಕೆಯ ವರದಿ ಆಧರಿಸಿ ನೋಟಿಸ್ ನೀಡಿದ್ದು, ಜೂನ್​ 22ರ ಒಳಗೆ ಉತ್ತರಿಸುವಂತೆ ಸೂಚಿಸಿದೆ.

ಮತ್ತೊಂದೆಡೆ ಮಹಿಳೆಯರು ಬೆಟ್ಟ ಹತ್ತಬಾರದು ಅಂತ ನಾವು ಯಾವುದೇ ತೀರ್ಮಾನ ಕೈಗೊಂಡಿಲ್ಲ. ತಪ್ಪು‌ಮಾಹಿತಿ‌ ಮೂಲಕ ಈ ರೀತಿ ಆಗಿದೆ. ‘ಅಷ್ಟಮಂಗಲ ಪ್ರಶ್ನೆ’ಯಲ್ಲೂ ಯಾವುದೇ ಪ್ರಸ್ತಾಪವಾಗಿಲ್ಲ. ಈ ಬಗ್ಗೆ ವಕೀಲರ ಮೂಲಕ ಮಾನವ ಹಕ್ಕು ಆಯೋಗಕ್ಕೆ ಮಾಹಿತಿ ನೀಡುವುದಾಗಿ ದೇವಾಲಯ ಸಮಿತಿ ಹೇಳಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv