ಗಣಿನಾಡಿನ ತಹಶೀಲ್ದಾರ್ ಕಚೇರಿ ಆವರಣದಲ್ಲಿದೆ.. ಒಂದು ಮಿನಿಕೆರೆ!

ಬಳ್ಳಾರಿ: ನಗರದಲ್ಲಿರುವ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಜನನಿಬಿಡ ಜಾಗದ ಮಧ್ಯೆ, ನೀರು ನಿಂತಿದ್ದನ್ನು ನೋಡಿ ಇದ್ಯಾವುದೋ ಸಣ್ಣ ಕೆರೆ ಅಂದುಕೊಳ್ಳಬೇಡಿ ಅಥವಾ ಮೋರಿನಾ ಅಂತಾ ಮೂಗುಮುರೀಬೇಡಿ. ಇದು ವಿಚಿತ್ರ ಆದ್ರೂ ಸತ್ಯ .. ಪ್ರತಿ ವರ್ಷ ಮಳೆ ಬಂದಾಗ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಇದೇ ದೃಶ್ಯ ಕಥೆ ಕಣ್ಣಿಗೆ ರಾಚುತ್ತದೆ. ಹೀಗಾಗಿ ಬಳ್ಳಾರಿ ಜನ ಇದನ್ನ ತಹಶೀಲ್ದಾರ್ ಸ್ವಿಮ್ಮಿಂಗ್ ಪೂಲ್ ಅಂತಾರೆ!

ಇನ್ನು ಇದೇ ಆವರಣದಲ್ಲಿ ತೋಟಗಾರಿಕಾ ಇಲಾಖೆಯ ಕಚೇರಿ ಕೂಡಾ ಇದೆ. ಅಲ್ಲದೆ ಉದ್ಯೋಗ ವಿನಿಮಯ ಕಚೇರಿಯೂ ಇದೆ. ಹೀಗಾಗಿ ದಿನನಿತ್ಯ ಇಲ್ಲಿಗೆ ಬರುವ ಸಾರ್ವಜನಿಕರು, ರೈತರು ಹಾಗೂ ಯುವಜನರು ಈ ಮಿನಿ ಕೆರೆ ಅಥವಾ ಸ್ವಿಮ್ಮಿಂಗ್ ಪೂಲ್​ನಲ್ಲಿರುವ ನೀರಿನಲ್ಲಿಯೇ ನಡೆದುಕೊಂಡು ಬರಬೇಕಾದ ಪರಿಸ್ಥಿತಿ ಎದುರಾಗಿದೆ.

ಇದಿಷ್ಟೇ ಅಲ್ಲ ಇದರ ಕೂಗಳತೆ ದೂರದಲ್ಲೇ ಜಿಲ್ಲಾಧಿಕಾರಿ ಕಚೇರಿ ಕೂಡಾ ಇದೆ. ಪಕ್ಕದಲ್ಲೇ ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣೆಯೂ ಇದೆ. ಇಂತಹ ನಗರದ ಹೃದಯ ಭಾಗದಲ್ಲಿ ಅದರಲ್ಲೂ ತಹಶೀಲ್ದಾರ್ ಕಚೇರಿಯ ಏಕೈಕ ಪ್ರವೇಶ ದ್ವಾರದಲ್ಲಿ.. ಮಿನಿ ಕೆರೆ ತುಂಬಿಕೊಂಡಿರುವುದು ಪಾಲಿಕೆಯ ನಿರ್ಲಕ್ಷ್ಯಕ್ಕೆ ಜಲ ಸಾಕ್ಷಿಯಾಗಿದೆ. ಮಳೆ ಬಂದಾಗಲೆಲ್ಲ ಹೀಗೆ ನಾಲ್ಕೈದು ದಿನ ನೀರು ನಿಲ್ಲೋದ್ರಿಂದ ಸೊಳ್ಳೆಗಳ ಕಾಟವೂ ಸುತ್ತಲಿನವರಿಗೆ ಕಾಡತೊಡಗುತ್ತದೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ಮತ್ತೆ ಮಳೆ ಬರುವುದರ ಒಳಗಾಗಿ ಮಿನಿ ಕೆರೆ ಸೃಷ್ಟಿ ಆಗದಂತೆ ಕ್ರಮ ಕೈಗೊಳ್ಳಬೇಕಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv