ಶ್ಯಾಮ್‌ಭಟ್‌ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾದ ವಿಡಿಯೋ ಬಹಿರಂಗ!

ಬೆಂಗಳೂರು: ಕೆಪಿಎಸ್​ಸಿ ಅಧ್ಯಕ್ಷ ಹಾಗೂ ಮಾಜಿ ಬಿಡಿಎ ಆಯುಕ್ತ ಶ್ಯಾಂ ಭಟ್ ವಿರುದ್ಧ ಮತ್ತೊಂದು ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಬಿಡಿಎಯಿಂದ ಹೊರ ಬಂದರೂ ಶ್ಯಾಂ ಭಟ್​ಗೆ ಬಿಡಿಎನಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರ ಆರೋಪಗಳು ಬಿಡುತ್ತಿಲ್ಲ. ಇದೀಗ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೊ‌.ಸಿ.ಎಸ್.ಸಿದ್ದರಾಜು ಶ್ಯಾಂ ಭಟ್​ ವಿರುದ್ಧ ಎಸಿಬಿಗೆ ದೂರು ದಾಖಲಿಸಿದ್ದಾರೆ. ಶ್ಯಾಂ ಭಟ್ ಈ ಹಿಂದೆ ಬಿಡಿಎ ಆಯುಕ್ತರಾಗಿದ್ದ ವೇಳೆ ರೈತರಿಂದ ಬರೋಬ್ಬರಿ ಎರಡು ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ದೂರು ನೀಡಿದ್ದಾರೆ. ಅಲ್ಲದೇ ಶ್ಯಾಮ್ ಭಟ್ ಎರಡು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿರುವ ವಿಡಿಯೋ ಕೂಡ ರಿಲೀಸ್ ಮಾಡಿದ್ದಾರೆ. ಒಂದು ಸೈಟ್‌ಗೆ 1.50 ಲಕ್ಷದಿಂದ 2 ಲಕ್ಷಕ್ಕೆ ಲಂಚ ಬೇಡಿಕೆ ಇಟ್ಟಿರುವ ವಿಡಿಯೋ ಇದಾಗಿದೆ ಎನ್ನಲಾಗಿದೆ. ಈ ಗಂಭೀರ ಆರೋಪದ ಬಗ್ಗೆ ಶ್ಯಾಮ್‌ಭಟ್‌ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.