‘ಪ್ರತಿದಿನ ಅಳುತ್ತಾ.. ದೂರುತ್ತಾ.. ಇಲ್ಲಿನ ಸಿಎಂ ಖುರ್ಚಿ ಉಳಿಸಿಕೊಳ್ಳಲು ಕಾಂಗ್ರೆಸ್ನವರನ್ನ ಅಪ್ಪಿಕೊಳ್ತಾರೆ’

ಧಾರವಾಡ: ಬಹುಮತದ ಸರ್ಕಾರವಿದ್ದರೆ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ಬಹುಮತದ ಸರ್ಕಾರ ಇಲ್ಲದಿದ್ದರೆ ಏನಾಗುತ್ತೆ ಅಂತಾ ರಾಜ್ಯದ ಮೈತ್ರಿ ಸರ್ಕಾರ ನೋಡಿದರೆ ಗೊತ್ತಾಗುತ್ತೆ ಅಂತಾ ಕೇಂದ್ರ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ ಸಾರ್ವಜನಿಕ ಸಂವಾದದಲ್ಲಿ ಮಾತನಾಡಿದ ಅವರು,  37 ಎಮ್‌ಎಲ್‌ಎ ಇದ್ದವರನ್ನು ಕಾಂಗ್ರೆಸ್ ಸಿಎಂ ಮಾಡಿ, ಪ್ರತಿದಿನ ಸಿಎಂ ಖುರ್ಚಿಯನ್ನು ಎಳೆದಾಡುತ್ತಾರೆ. ಇಲ್ಲಿನ ಸಿಎಂ ಪ್ರತಿದಿನ ಅಳುತ್ತಾ.. ದೂರುತ್ತಾ.. ಖುರ್ಚಿ ಉಳಿಸಿಕೊಳ್ಳಲು ಕಾಂಗ್ರೆಸ್‌ನವರನ್ನೇ ಅಪ್ಪಿಕೊಳ್ಳುತ್ತಾರೆ ಅಂತಾ ಪರೋಕ್ಷವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಬಗ್ಗೆ ವ್ಯಂಗ್ಯವಾಡಿದ್ರು.

ಇದೇ ವೇಳೆ, ಇಸ್ಲಾಮಿಕ್ ದೇಶಗಳೊಂದಿಗೆ ಮೋದಿಯವರು ಅತ್ಯುತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಸೌದಿ ಅರೇಬಿಯಾ, ಪ್ಯಾಲೆಸ್ಟೈನ್, ಯುಎಇ, ಅಪ್ಘಾನಿಸ್ತಾನ್‌ದಂತಹ ಇಸ್ಲಾಮಿಕ್ ರಾಷ್ಟ್ರಗಳು ಮೋದಿಯವರನ್ನು ಅತ್ಯುನ್ನತ ನಾಗರಿಕ ಗೌರವ ನೀಡಿ ಸನ್ಮಾನಿಸಿವೆ. ಇಸ್ಲಾಮಿಕ್ ರಾಷ್ಟ್ರಗಳು ಪಾಕಿಸ್ತಾನದ ಬೆದರಿಕೆಯನ್ನು ತಿರಸ್ಕರಿಸಿ, ಭಾರತವನ್ನು ಸಭೆಗೆ ಆಹ್ವಾನಿಸಿವೆ ಅಂತಾ ಹೇಳಿದರು. ಅಲ್ಲದೇ, ಭಯೋತ್ಪಾದಕರನ್ನು ಗೌರವದಿಂದ ಜೀ ಎಂದು ಕರೆಯುವವರಿಗೆ ನಿಮ್ಮ ಮತ ಪಡೆಯುವ ಹಕ್ಕಿದೆಯಾ..? ದೇಶವನ್ನು ವಿಭಜಿಸುವವರಿಗೆ ನಿಮ್ಮ ಮತ ಪಡೆಯುವ ಹಕ್ಕಿದೆಯಾ..? ರಾಷ್ಟ್ರದ ಸುರಕ್ಷತೆಯನ್ನು ಪಣಕ್ಕಿಟ್ಟ ದೇಶ ವಿರೋಧಿಗಳಿಗೆ ಮತ ನೀಡುತ್ತೀರಾ..? ಅಂತಾ ಸುಷ್ಮಾ ಸ್ವರಾಜ್ ಪ್ರಶ್ನೆ ಮಾಡಿದ್ರು.

‘ಎಲ್ಲ ವರ್ಗದ ಜನರ ಕಲ್ಯಾಣಕ್ಕೆ ಮೋದಿ ಸರ್ಕಾರ ಕೆಲಸ ಮಾಡಿದೆ’
ಅಲ್ಲದೇ, ಹಜ್ ಯಾತ್ರೆಗೆ ಪ್ರತಿವರ್ಷ ತೆರಳುತ್ತಿದ್ದ ಮುಸ್ಲಿಮರ ಸಂಖ್ಯೆಯನ್ನು ಐವತ್ತು ಸಾವಿರದಿಂದ ಒಂದು ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮಹಿಳೆಯರು ಪುರುಷರ ಜೊತೆಗೆ ಹಜ್‌ಗೆ ತೆರಳಬೇಕು ಎನ್ನುವ ನಿರ್ಬಂಧವನ್ನು ಸಡಿಲಿಸಲಾಗಿದೆ. ಎಲ್ಲ ವರ್ಗದ ಜನರ ಕಲ್ಯಾಣಕ್ಕೆ ಮೋದಿಯವರ ಸರ್ಕಾರ ಕೆಲಸ ಮಾಡಿದೆ. ಪೂರ್ಣ ಬಹುಮತದ ಕಾರಣ ಮೋದಿಯವರು ಇಷ್ಟೆಲ್ಲ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ ಅಂತಾ ಸುಷ್ಮಾ ಸ್ವರಾಜ್ ಹೇಳಿದ್ರು.