ಮದುವೆಯಾಗುವುದಾಗಿ ಸುಳ್ಳು ಹೇಳಿ ದೈಹಿಕ ಸಂಬಂಧ ಬೆಳೆಸಿದ್ರೆ ಅದು ಅತ್ಯಾಚಾರ..!

ನವದೆಹಲಿ: ಮದುವೆಯಾಗುವುದಾಗಿ ಸುಳ್ಳು ಹೇಳಿ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಿವುದಾಗಿ ಸುಪ್ರೀಂಕೋರ್ಟ್ ಪ್ರಕರಣವೊಂದರಲ್ಲಿ ತೀರ್ಪು ನೀಡಿದೆ. ಅಲ್ಲದೇ ಇದು ಮಹಿಳೆಯ ಗೌರವಕ್ಕೆ ಹಾನಿ ಮಾಡಿದಂತೆ ಅಂತಾ ಅಭಿಪ್ರಾಯಪಟ್ಟಿದೆ. ಛತ್ತೀಸ್​ಗಢ ಮೂಲದ ವೈದ್ಯೆಯೊಬ್ಬರು 2013ರಲ್ಲಿ ತಮ್ಮ ಮೇಲೆ ನಡೆದ ಅತ್ಯಾಚಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಆರೋಪಿ ಹಾಗೂ ವೈದ್ಯೆ 2009ರಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆರೋಪಿಯು ಆಕೆಯನ್ನು ಮದುವೆ ಆಗುವುದಾಗಿ ಹೇಳಿ ದೈಹಿಕ ಸಂಬಂಧ ಬೆಳಸಿದ್ದ. ಇವರಿಬ್ಬರ ನಡುವಿನ ಪ್ರೀತಿ ಅವರ ಕುಟುಂಬದವರಿಗೂ ಸಹ ತಿಳಿದಿತ್ತು. ಇದರ ನಡುವೆ ಆರೋಪಿ ಮತ್ತೊಬ್ಬ ಮಹಿಳೆ ಜೊತೆಗೆ ಮದುವೆ ಆಗಿದ್ದ. ಇದರ ವಿರುದ್ಧ ವೈದ್ಯೆ ಅತ್ಯಾಚಾರದ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಆರೋಪಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ. ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ್ ರಾವ್, ಮತ್ತು ಎಂ.ಆರ್.ಶಾ ಅವರನ್ನೊಳಗೊಂಡ ಪೀಠ ಇದರ ವಿಚಾರಣೆ ನಡೆಸಿತು. ಆರೋಪಿಗೆ ಸಂತ್ರಸ್ತೆಯನ್ನು ಮದುವೆ ಆಗುವ ಉದ್ದೇಶ ಇರಲಿಲ್ಲ. ಮದುವೆಯಾಗುವುದಾಗಿ ನಂಬಿಸಿ ಮಹಿಳೆ ಜೊತೆಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ. ಹೀಗಾಗಿ, ಇದನ್ನು ಅತ್ಯಾಚಾರ ಎಂದು ಪರಿಗಣಿಸಿರುವುದಾಗಿ ಕೋರ್ಟ್ ಹೇಳಿದ್ದು, ಆರೋಪಿಗೆ 7 ವರ್ಷದ ಜೈಲು ಶಿಕ್ಷೆ ವಿಧಿಸಿದೆ.