‘ಚೌಕಿದಾರ್ ಚೋರ್’​ ಅಂದಿದೆ ಸುಪ್ರೀಂಕೋರ್ಟ್​ ಅಂತಾ ಹೇಳಿಕೆ, ವಿವರ ಕೇಳಿ ರಾಹುಲ್​ಗೆ ನೋಟಿಸ್..!

ನವದೆಹಲಿ: ರಫೇಲ್​​​ಗೆ ಸಂಬಂಧಿಸಿದ ತನ್ನ​​ ಆದೇಶವನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಪ್ಪಾಗಿ ವಿವರಿಸಿದ್ದಾರೆ ಎಂಬ ಆರೋಪ ಸಂಬಂಧ ಸುಪ್ರೀಂ ಕೋರ್ಟ್​ ವಿವರಣೆ ಕೇಳಿದೆ. ತಮ್ಮ ಹೇಳಿಕೆಯ ಬಗ್ಗೆ  ವಿವರಣೆ ನೀಡುವಂತೆ ರಾಹುಲ್ ಗಾಂಧಿಗೆ ಉನ್ನತ ನ್ಯಾಯಾಲಯ 1 ವಾರದ ಗಡುವು ನೀಡಿದೆ.

ಕಳ್ಳತನವಾದ ರಫೇಲ್ ದಾಖಲೆಗಳನ್ನು ಅರ್ಜಿದಾರರು ಬಳಸಿಕೊಂಡಿದ್ದಾರೆ ಎಂದು ಈ ಹಿಂದೆ ಕೇಂದ್ರ ಸರ್ಕಾರ ಕೋರ್ಟ್​ಗೆ ಹೇಳಿತ್ತು. ಈ ದಾಖಲೆಗಳನ್ನ ಕೋರ್ಟ್​ನಲ್ಲಿ ಸಾಕ್ಷಿಯಾಗಿ ಬಳಸಲು ಸುಪ್ರೀಂ ಕೋರ್ಟ್​ ಕಳೆದ ವಾರ ಸಮ್ಮತಿ ನೀಡಿತ್ತು. ಸುಪ್ರೀಂ ಕೋರ್ಟ್​​ನ ಈ ಆದೇಶವನ್ನು ರಾಹುಲ್ ಗಾಂಧಿ ಸಾರ್ವಜನಿಕರ ಮುಂದೆ ಹಾಗೂ ಮಾಧ್ಯಮಗಳ ಮುಂದೆ ತಪ್ಪಾಗಿ ವಿವರಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.

ರಫೇಲ್​​​ ಆದೇಶಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಅಮೇಥಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಸುಪ್ರೀಂ ಕೊರ್ಟ್​​ಗೆ ನಾನು ಧನ್ಯವಾದ ಹೇಳುತ್ತೇನೆ. ಇಡೀ ದೇಶ ಚೌಕಿದಾರ್​ ಚೋರ್​​ ಹೈ ಎಂದು ಹೇಳುತ್ತಿದೆ. ಸುಪ್ರೀಂ ಕೋರ್ಟ್​ ಇಂದು ನ್ಯಾಯದ ಪರವಾಗಿ ಮಾತನಾಡಿದೆ. ಚೌಕಿದಾರ್​ ಚೋರ್​ ಹೇ ಅನ್ನೋದನ್ನ ಸುಪ್ರೀಂ ಕೋರ್ಟ್​ ಎತ್ತಿಹಿಡಿದಿದೆ. ಇದು ಸೆಲೆಬ್ರೇಷನ್​​​ನ ದಿನ ಎಂದು ಹೇಳಿದ್ದರು. ರಾಹುಲ್ ಗಾಂಧಿ ತಮ್ಮ ವೈಯಕ್ತಿಕ ಹೇಳಿಕೆಯನ್ನು ಸುಪ್ರೀಂ ಕೋರ್ಟ್​ ಹೇಳಿಕೆಯೆಂಬಂತೆ ಬಿಂಬಿಸಿದ್ದಾರೆ ಎಂದು ಬಿಜೆಪಿಯ ಮೀನಾಕ್ಷಿ ಲೇಖಿ ಕೋರ್ಟ್​​ ಮೆಟ್ಟಿಲೇರಿದ್ದರು.

“ಕೋರ್ಟ್​ ಆ ರೀತಿಯ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ದಾಖಲೆಗಳನ್ನ ಸಾಕ್ಷಿಯಾಗಿ ಪರಿಗಣಿಸಬಹುದು ಎಂದು ಮಾತ್ರ ಆದೇಶ ನೀಡಲಾಗಿದೆ ಎಂಬುದನ್ನ ಸ್ಪಷ್ಟಪಡಿಸುತ್ತಿದ್ದೇವೆ” ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಹೇಳಿದ್ದಾರೆ. ಈ ಸಂಬಂಧ ಒಂದು ವಾರದೊಳಗೆ ವಿವರಣೆ ನೀಡುವಂತೆ ರಾಹುಲ್ ಗಾಂಧಿಗೆ ಕೋರ್ಟ್​ ಸೂಚಿಸಿದೆ. ಏಪ್ರಿಲ್ 23ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv