ಮೆಸ್ಸಿಯನ್ನ ಸರಿಗಟ್ಟಿದ ಸುನೀಲ್​​ ಚೆಟ್ರಿ..!

ವಿಶ್ವ ಫುಟ್ಬಾಲ್​ನಲ್ಲಿ ಅಂಬೆಗಾಲಿಡುತ್ತಿರುವ ಭಾರತ ತಂಡದ ರಾಂಕಿಂಗ್​ 97ನೇ ಸ್ಥಾನದಲ್ಲಿರಬಹುದು. ಆದರೆ, ಅಂತಾರಾಷ್ಟ್ರೀಯ ಫುಟ್ಬಾಲ್​​ನಲ್ಲಿ ಅತಿ ಹೆಚ್ಚು ಗೋಲ್​ ದಾಖಲಿಸಿರುವವರ ಪಟ್ಟಿಯಲ್ಲಿ ಭಾರತ ನಂ. 2 ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಿದೆ. ಇದಕ್ಕೆಲ್ಲ ಕಾರಣ ಭಾರತ ಫುಟ್ಬಾಲ್​ ತಂಡದ ಹೆಮ್ಮೆಯ ಆಟಗಾರ, ನಾಯಕ ಸುನೀಲ್​ ಚೆಟ್ರಿ.

 

ಭಾರತದ ಸ್ಟ್ರೈಕರ್​ ಸುನೀಲ್​ ಚೆಟ್ರಿ ಅಂತಾರಾಷ್ಟ್ರೀಯ ಫುಟ್ಬಾಲ್​ ಅಖಾಡದಲ್ಲಿ ಈವರೆಗೆ ಬಾರಿಸಿರುವ ಗೋಲುಗಳ ಸಂಖ್ಯೆ ಇದೀಗ ಫುಟ್ಬಾಲ್​​​ನ ಸ್ಟಾರ್​ ಆಟಗಾರ ಅರ್ಜೆಂಟೀನಾದ ಲಿಯೋನೆಲ್​​ ಮೆಸ್ಸಿ ಅವರನ್ನ ಸರಿಗಟ್ಟಿದೆ. ಲಿಯೋನೆಲ್​ ಮೆಸ್ಸಿ ಹಾಗೂ ಸುನೀಲ್​ ಇಬ್ಬರೂ 64 ಗೋಲುಗಳ ಬಾರಿಸುವ ಮೂಲಕ ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ. ಹಾಗೆ ನೋಡಿದ್ರೆ, ಸುನೀಲ್​ ಚೆಟ್ರಿ ಅವರ ಸಾಧನೆ ಮೆಸ್ಸಿಗಿಂತ ಒಂದು ಹೆಜ್ಜೆ ಮೇಲೆ ಅನ್ನಬಹುದಾಗಿದೆ. ಯಾಕಂದ್ರೆ, ಮೆಸ್ಸಿ 64 ಗೋಲುಗಳನ್ನ ಬಾರಿಸಲು 124 ಪಂದ್ಯಗಳನ್ನ ತೆಗೆದುಕೊಂಡಿದ್ರೆ, ಚೆಟ್ರಿ ಕೇವಲ 101 ಪಂದ್ಯಗಳಿಂದ ಇಷ್ಟೊಂದು ಗೋಲುಗಳನ್ನ ಬಾರಿಸಿದ್ದಾರೆ. ಇನ್ನು, ಸದ್ಯದ ಆಟಗಾರರಲ್ಲಿ 149 ಪಂದ್ಯಗಳಿಂದ 81 ಗೋಲು ಬಾರಿಸಿರುವ ಪೋರ್ಚುಗಲ್​​ನ ಕ್ರಿಶ್ಚಿಯಾನೋ ರೊನಾಲ್ಡೋ ಮೊದಲ ಸ್ಥಾನದಲ್ಲಿದ್ದಾರೆ.

ಫೈನಲ್​​ನಲ್ಲಿ ಎರಡು ಗೋಲು ಬಾರಿಸಿದ ಚೆಟ್ರಿ

ನಿನ್ನೆಯಷ್ಟೇ ಮುಕ್ತಾಯಗೊಂಡ ಇಂಟರ್​ಕಾಂಟಿನೆಂಟಲ್​ ಕಪ್​ ಫೈನಲ್​​ನಲ್ಲಿ ಚೆಟ್ರಿ ಮತ್ತೆ ಶೈನ್​ ಆಗಿದ್ದಾರೆ. 8ನೇ ಹಾಗೂ 29ನೇ ನಿಮಿಷಗಳಲ್ಲಿ ಗೋಲು ಬಾರಿಸಿದ ಸುನೀಲ್​ ಚೆಟ್ರಿ ಭಾರತದ ಗೆಲುವನ್ನ ಖಾತ್ರಿಪಡಿಸಿದರು. ಈ ಮೂಲಕ ಸದ್ಯದ ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲು ಗಳಿಸಿದವರ ಲಿಸ್ಟ್​​​ನಲ್ಲಿ 2ನೇ ಸ್ಥಾನದಲ್ಲಿ ಅರ್ಜೆಂಟೀನಾದ ಲಿಯೋನೆಲ್​ ಮೆಸ್ಸಿ ಅವರನ್ನ ಸರಿಗಟ್ಟಿದರು. ಚೆಟ್ರಿ ಹಾಗೂ ಮೆಸ್ಸಿ ಇಬ್ಬರೂ 64 ಗೋಲು ಗಳಿಸಿ 2ನೇ ಸ್ಥಾನದಲ್ಲಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv