ಗೆದ್ದರೆ.. ಸುಮಲತಾ ಅಂಬರೀಶ್​ಗೆ ಒಲಿದು ಬರುತ್ತಾ ಕೇಂದ್ರ ಸಚಿವರಾಗೋ ಯೋಗ..!

ಬೆಂಗಳೂರು: 2019ರ ಲೋಕಸಭಾ ಕ್ಷೇತ್ರದ ಚುನಾವಣೆಯ ಫಲಶ್ರುತಿಯಾಗಿ ಸುಮಲತಾ ಅಂಬರೀ​​ಶ್​​ಗೆ ಒಲಿದು ಬರುತ್ತಾ ರಾಜಯೋಗ? ಎಂಬ ಕುತೂಹಲದ ಪ್ರಶ್ನೆ ಮೂಡಿದೆ.
ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಬೆಂಬಲಿತ, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸತ್ ಪ್ರವೇಶಿಸಿದ್ರೆ, ಮನೆ ಬಾಗಿಲಿಗೆ ಬರುತ್ತಾ ರಾಜಯೋಗ?

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದು, ಸುಮಲತಾ ಅಂಬರೀಶ್​ ಲೋಕಸಭೆಗೆ ಪ್ರವೇಶಿಸಿದ್ರೆ ರಾಜಯೋಗ ಸಿಗುವ ಸಾಧ್ಯತೆ ಇದೆ. ಈ ಬೆಳವಣಿಗೆ ನಡೆದಿದ್ದೇ ಅದ್ರೆ ಸುಮಲತಾ ಅಂಬರೀಶ್​ ಕೇಂದ್ರದಲ್ಲಿ ಸಚಿವರಾಗುವ ಸಾಧ್ಯತೆ ನಿಶ್ಚಿತ! ಸುಮಲತಾ ಅಂಬರೀಶ್​ ಕೇಂದ್ರ ಸರ್ಕಾರದಲ್ಲಿ ಸಚಿವರಾಗುವ ಸಾಧ್ಯತೆ ಬಗ್ಗೆ
ಫಸ್ಟ್‌ ನ್ಯೂಸ್‌ಗೆ ಬಿಜೆಪಿ ಮೂಲಗಳ ಮಾಹಿತಿ.

2019 ರ ಲೋಕಸಭಾ ಕ್ಷೇತ್ರದ ಚುನಾವಣೆಯ ಆಖಾಡದಲ್ಲಿ ಸುಮಲತಾ ಅಂಬರೀಶ್​ ಓಡಾಟ, ಹೋರಾಟದ ಕುರಿತು ಪ್ರಧಾನಿ ನರೇಂದ್ರ ಮೋದಿ ಸಮಗ್ರ ಮಾಹಿತಿ ತರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಮುಖ್ಯಮಂತ್ರಿಯ ಮಗನ ವಿರುದ್ಧ ರಣಾಂಗಣದಲ್ಲಿ ಹೋರಾಡಿದ ಸುಮಲತಾ ಅಂಬರೀಶ್ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿರುವ ನರೇಂದ್ರ ಮೋದಿ ಪ್ರಚಾರ ಕಾರ್ಯದಲ್ಲಿ,‌ ಮತದಾರರ ಮುಂದೆ ಮಂಡಿಸಿದ ವಿಚಾರಗಳು, ಸಮಾವೇಶಗಳ ಬೃಹತ್ ವೇದಿಕೆಗಳಲ್ಲಿ ಸುಮಲತಾ ಅಂಬರೀಶ್​ ನಡೆದುಕೊಂಡ ರೀತಿ, ಮಾಧ್ಯಮಗಳಲ್ಲಿ ಕೊಟ್ಟಿರುವ ಸಂದರ್ಶನ ಸೇರಿದಂತೆ ಮಂಡ್ಯ ಪಕ್ಷೇತರ ಅಭ್ಯರ್ಥಿಯ ಸಮಗ್ರ ಮಾಹಿತಿಯನ್ನು ಪ್ರಧಾನಿ ಮೋದಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.
ಸುಮಲತಾ ಅಂಬರೀಶ್​ ಅವರನ್ನು ಬಳಸಿಕೊಂಡು ಹೆಚ್.ಡಿ.ದೇವೇಗೌಡರ ಕುಟುಂಬಕ್ಕೆ ಟಾಂಗ್ ನೀಡಲು,‌ ಕೇಂದ್ರದಲ್ಲಿ ಸಚಿವ ಸ್ಥಾನ ನೀಡುವ ಸಾಧ್ಯತೆಯಿದೆ. ಜೊತೆಗೆ ಸುಮಲತಾ ಅಂಬರೀಶ್​ ಮುಖಾಂತರ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ನೆಲೆ ಕಟ್ಟಿಕೊಳ್ಳಲು ವೇದಿಕೆಯನ್ನು ಸಿದ್ಧಪಡಿಸುವ ಸಾಧ್ಯತೆಯೂ ಗೋಚರವಾಗಿದೆ. ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ಅದ್ರೆ, ನರೇಂದ್ರ ಮೋದಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗುವ ಮೂಲಕ ಸುಮಲತಾ ಅಂಬರೀಷ್‌ ರಾಜಯೋಗ ಅನುಭವಿಸುವ ಸಾಧ್ಯತೆ ಹೆಚ್ಚಾಗಿದೆ.

ವಿಶೇಷ ಬರಹ: ಪಿ ಮಧುಸೂಧನ್​