‘ಯದ್ಧದಂತೆ ನಡೆಯಿತು ಚುನಾವಣೆ.. ಹೆಚ್ಚು ಬಾಂಬ್​ಗಳು ನನ್ನ ಮೇಲೆಯೇ ಬಿದ್ದಿವೆ’

ಮಂಡ್ಯ: ಜಿಲ್ಲೆಯಲ್ಲಿ ನನ್ನ ಬೆಂಬಲಿಗರನ್ನ ಟಾರ್ಗೆಟ್​ ಮಾಡಲಾಗುತ್ತಿದೆ ಅಂತಾ ಸುಮಲತಾ ಅಂಬರೀಶ್ ಆರೋಪಿಸಿದ್ದಾರೆ.

ಚುನಾವಣೆ ಮುಗಿದ ಮೇಲೂ ನನ್ನ ಬೆಂಬಲಿಗರ ಟಾರ್ಗೆಟ್
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಎಷ್ಟೋ ನೆಗೆಟಿವಿಟಿಗಳನ್ನ ನೋಡಿದ್ದೀವಿ. ಇದ್ರಿಂದ ಸಮಾಜಕ್ಕೆ ಯಾವ ರೀತಿ ಸಂದೇಶ ಹೋಗಿದೆ ಅನ್ನೋದನ್ನ ನೆನಪಿಟ್ಟುಕೊಳ್ಳಬೇಕು. ಯಾರು ನನ್ನ ಬೆಂಬಲಕ್ಕೆ ನಿಂತಿದ್ದರೋ ಅಂಥವರ ಟಾರ್ಗೆಟ್ ಮಾಡಿ ಕಿರುಕುಳ ನೀಡಲಾಗ್ತಿದೆ. ಇದು ಗಂಭೀರ ವಿಚಾರ. ಅಧಿಕಾರದಲ್ಲಿದ್ದವರು ಈ ರೀತಿ ಮಾಡಬೇಡಿ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜಕಾರಣ ಅಂದ್ರೆ ಜನರಿಗೆ ಬೇರೆ ಅರ್ಥವಿದೆ. ಯಾರ ಸ್ವಭಾವ ಏನು ಅನ್ನೋದು ಜನರಿಗೆ ಚುನಾವಣೆಯಿಂದ ಅರ್ಥವಾಗಿದೆ. ಬೆಟ್ಟಿಂಗ್ ನಡೆಯುತ್ತಿದೆ ಅನ್ನೋದನ್ನ ನೋಡಿದ್ದೇನೆ. ದಯಮಾಡಿ ಯಾರೂ ಬೆಟ್ಟಿಂಗ್ ಆಡಿ ರಿಸ್ಕ್ ತಗೋಬೇಡಿ. ನಮ್ಮಲ್ಲಿ ತಪ್ಪಿಲ್ಲ ಅಂದಾಗ ಎದುರಿಸುವ ಧೈರ್ಯ ಬರುತ್ತದೆ. ಕಾರ್ಯಕರ್ತರನ್ನ ಕುಗ್ಗಿಸಬಾರದೆಂದು ನನ್ನ ನೋವನ್ನ ನಾನೇ ನುಂಗಿಕೊಂಡೆ. ನಿಜಕ್ಕೂ ನನಗೆ ಇದೊಂದು ಒಳ್ಳೆ ಅನುಭವ. ಯುದ್ಧದಂತೆ ಚುನಾವಣೆ ನಡೆದಿರಬಹುದು, ಆದರೆ ಹೆಚ್ಚು ಬಾಂಬ್ ದಾಳಿ ನನ್ನ ಮೇಲೆಯೇ ಆಗಿದೆ. ನಾನು ಸರ್ಜಿಕಲ್ ಸ್ಟ್ರೈಕ್ ಮಾಡಲ್ಲ, ಸಿಕ್ಸರ್ ಹೊಡಿಬೇಕು ಅಷ್ಟೇ ಎಂದರು.

ಮಂಡ್ಯಾನೇ ನಂಗೆ ಸಿಂಗಾಪುರ
ಚುನಾವಣೆ ಮುಗಿದ ಬಳಿಕ ಸುಮಲತಾ ಅಂಬರೀಶ್ ಸಿಂಗಾಪುರಕ್ಕೆ ಹೋಗಲಿದ್ದಾರೆ ಅನ್ನೋ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಮಗೆ ಮಂಡ್ಯಾನೇ ಸಿಂಗಾಪುರ. ಅವರು ಪ್ರಾರಂಭದಿಂದ‌ ಕೊನೆವರೆಗೆ ಅಂಬರೀಶ್ ಅಂತ್ಯಕ್ರಿಯೆಯಲ್ಲೇ ರಾಜಕಾರಣ ಮುಗಿಸಿದ್ದಾರೆ ಅಂತಾ ಸಿಎಂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟರು.

ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು
ಪಕ್ಷೇತರವಾಗಿ ಸ್ಪರ್ಧಿಸಿದ ನನಗೆ ಕ್ಷೇತ್ರದಾದ್ಯಂತ ಜನ ಬೆಂಬಲ ಸಿಕ್ಕಿತ್ತು. ನಾನು ಹಾಕಿದ ಹೆಜ್ಜೆಗೆ ಕಾಂಗ್ರೆಸ್ ಕಾರ್ಯಕರ್ತರು ಕಾರಣಿಕರ್ತರು. ಬಹಿರಂಗ ಬೆಂಬಲ ನೀಡಿದ ಬಿಜೆಪಿ, ರೈತಸಂಘಕ್ಕೆ ಕೃತಜ್ಞತೆಗಳು ಎಂದರು. ವಿವಿಧ ಸಂಘಟನೆಗಳ ಸಹಕಾರದಿಂದ ನನ್ನ ಶಕ್ತಿ ಮತ್ತಷ್ಟು ಹೆಚ್ಚಿತ್ತು. ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ.ರವೀಂದ್ರ ಸ್ವಾಭಿಮಾನಿ ಪಾದಾಯಾತ್ರೆ ಮಾಡಿದರು. ಕೆ.ಆರ್.ಪೇಟೆ ಅಭಿಮಾನಿ ಉರುಳು ಸೇವೆ ಮಾಡಿದ್ದಾರೆ. ಚಿತ್ರರಂಗದ ದರ್ಶನ್, ಯಶ್, ದೊಡ್ಡಣ್ಣ, ರಾಕ್ ಲೈನ್ ನನ್ನ ಬೆನ್ನಿಗೆ ನಿಂತಿದ್ದರು. ಶಿಸ್ತು ಕ್ರಮಕ್ಕೂ ಬಗ್ಗದೇ ನನ್ನ ಜೊತೆ ಗುರುತಿಸಿಕೊಂಡ ಬ್ಲಾಕ್ ಕಾಂಗ್ರೆಸ್ ಮುಖಂಡರಿಗೂ ಧನ್ಯವಾದಗಳು. ಪ್ರಜ್ಞಾವಂತ ಮತದಾರರಿಗೆ ವಿಶೇಷ ಕೃತಜ್ಞತೆಗಳು ಎಂದರು.

ಬೆಂಗಳೂರಿಗೆ ಹೋಲಿಸಿಕೊಂಡರೆ ಮಂಡ್ಯ ಕ್ಷೇತ್ರದ ಮತದಾನ ಶೇಕಡಾವಾರಿನಲ್ಲಿ ದಾಖಲೆಯಾಗಿದೆ. ಬೆಂಗಳೂರಿನಲ್ಲಿ ಎಲ್ಲಾ ಸೌಲಭ್ಯಗಳಿದ್ದರೂ ಮತದಾನವಾಗಿಲ್ಲ. ಆದರೆ ಕೆಲ ಸೌಲಭ್ಯಗಳಿಲ್ಲದ ಗ್ರಾಮೀಣ ಭಾಗವಾದ ಮಂಡ್ಯ ಜನ ಅತಿ ಹೆಚ್ಚು ಮತದಾನ ಮಾಡಿದ್ದಾರೆ. ಮಹಿಳೆಯರು ಹೆಚ್ಚಾಗಿ ಮತದಾನ ಮಾಡಿದ್ದಾರೆ ಎಂದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv