ಮೈಸೂರಿಗೆ ಬಂದಿಳಿದರು ಸುಧಾಮೂರ್ತಿ, ನಾಳೆ ತುಲಾ ಲಗ್ನದಲ್ಲಿ ದಸರಾ ಉದ್ಘಾಟನೆ..!

ಮೈಸೂರು: ಮೈಸೂರು ದಸರಾ ಉತ್ಸವ 2018ರ ಉದ್ಘಾಟನೆಗಾಗಿ ಇನ್ಫೋಸಿಸ್ ಫೌಂಡೇಷನ್​ನ ​ಮುಖ್ಯಸ್ಥೆ ಸುಧಾಮೂರ್ತಿ ಮೈಸೂರಿಗೆ ಬಂದಿಳಿದಿದ್ದಾರೆ. ನಗರಕ್ಕೆ ಆಗಮಿಸಿದ ಸುಧಾಮೂರ್ತಿ ಅವರನ್ನು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಹೂಗುಚ್ಛ ನೀಡಿ ಸ್ವಾಗತಿಸಿದರು. ಸುಧಾಮೂರ್ತಿ ಅವರೊಂದಿಗೆ ಪತಿ ನಾರಾಯಣ್ ಮೂರ್ತಿ ಕೂಡಾ ಆಗಮಿಸಿದ್ದಾರೆ. ಈ ವೇಳೆ ಮಾತನಾಡಿದ ಸುಧಾಮೂರ್ತಿ, 1959 ರಲ್ಲಿ ಜಯಚಾಮರಾಜ ಒಡೆಯರ್ ಅವರಿದ್ದಾಗ ದಸರಾ ನೋಡಿದ್ದೆ. ನಾನು ಆಗ 8ನೇ ತರಗತಿ ಓದುತ್ತಿದ್ದೆ. ಈ ಬಾರಿ ದಸರಾ ಹಬ್ಬದ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿರೋದು ಖುಷಿ ತಂದಿದೆ. ಉದ್ಘಾಟನೆಗಾಗಿ ನನ್ನ ಹೆಸರು ಪ್ರಕಟಿಸಿದಾಗ ನನಗೆ ಫಸ್ಟ್ ಱಂಕ್ ಬಂದಷ್ಟೇ ಸಂತೋಷ ಆಯ್ತು ಅಂತಾ ತಿಳಿಸಿದರು.

ಇದೇ ವೇಳೆ, ನನಗೆ ಉದ್ಘಾಟನೆ‌ ಮಾಡಲು ಅವಕಾಶ ಕೊಟ್ಟಿರುವುದು ಮಹಿಳಾ ಸಾಧಕಿಗೆ ಕೊಟ್ಟಿರುವ ಗೌರವ ಎಂದುಕೊಳ್ಳುತ್ತೇನೆ. ದಸರಾ ಇತರೆ ಹಬ್ಬಗಳಂತಲ್ಲ, ಈ ಹಬ್ಬ ಇತಿಹಾಸದ ಜೊತೆಗೆ ಬೆಸೆದುಕೊಂಡಿದೆ. ದಸರಾ ಬಗ್ಗೆ ಮಕ್ಕಳು ಹಾಗೂ ಯುವಕರು ಹೆಚ್ಚು ತಿಳಿದುಕೊಳ್ಳಬೇಕಿದೆ. ಹಾಗಾಗಿ ದಸರಾ ಆಚರಣೆಯನ್ನ ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕು ಅಂತಾ ಮನವಿ ಮಾಡಿದರು.

ಈ ಬಾರಿಯ ದಸರಾ ಹಬ್ಬದ ಉದ್ಘಾಟನೆಗಾಗಿ ಅರಮನೆ ಆಡಳಿತ ಮಂಡಳಿ ಸುಧಾಮೂರ್ತಿಯವರಿಗೆ ಆಹ್ವಾನ ನೀಡಿತ್ತು. ನಾಳೆ ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ 7. 05 ರಿಂದ 7.35 ರೊಳಗೆ ಸಲ್ಲುವ ತುಲಾ ಲಗ್ನದಲ್ಲಿ  ಸುಧಾಮೂರ್ತಿ ಉದ್ಘಾಟಿಸಲಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv