ಸರ್ಕಾರಿ ಶಾಲೆಯನ್ನು ಮುಚ್ಚಲು ಬಿಡದ ವಿದ್ಯಾರ್ಥಿಗಳು..!

ಚಿತ್ರದುರ್ಗ : ಸರ್ಕಾರಿ ಶಾಲೆಗಳನ್ನು ಮುಚ್ಚೋದಿಲ್ಲ ಅನ್ನುವ ಸರ್ಕಾರ ಚಿತ್ರದುರ್ಗ ತಾಲೂಕಿನ ಆಲಘಟ್ಟ ಗ್ರಾಮದ ಶಾಲೆಯನ್ನು ಮುಚ್ಚಲು ಮುಂದಾಗಿತ್ತು. ಆದ್ರೆ, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಹೋರಾಟ ಮಾಡಿ ಶಾಲೆಯಿಂದ ಮುಖ್ಯಮಂತ್ರಿ ಮನೆವರೆಗೂ ಹೋಗಿ ಶಾಲೆಯನ್ನು ಮುಚ್ಚದಂತೆ ಮಾಡಿದ್ದಾರೆ.
ಶಾಲೆಯನ್ನು ವಿದ್ಯಾರ್ಥಿಗಳ ಸಂಖ್ಯೆಯ ಕೊರತೆಯ ಕಾರಣ ನೀಡಿ ಭರಮಸಾಗರ ಗ್ರಾಮಕ್ಕೆ ಸ್ಥಳಾಂತರಿಸಿತ್ತು. ಅದೂ, ಶಾಲೆಯಲ್ಲಿ ವಿದ್ಯಾರ್ಥಿಗಳು ಅಡ್ಮಿಷನ್ ಮಾಡಿದ 15 ದಿನಗಳ ನಂತರ ಶಾಲೆಯನ್ನು ಸ್ಥಳಾಂತರಿಸಲು ಮುಂದಾಗಿತ್ತು. ಸರ್ಕಾರದ ಈ ನಡೆ ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೇ, ಈ ಕೂಡಲೆ ವಿದ್ಯಾರ್ಥಿಗಳು ತಮ್ಮ ತಮ್ಮ ಟಿಸಿ ತಗೆದುಕೊಂಡು ಸ್ಥಳಾಂತರಿಸಿರುವ ಶಾಲೆಗೆ ಹಾಜರಾಗಲು ಕೋರಲಾಗಿತ್ತು. ಈ ಎಲ್ಲ ಬೆಳವಣಿಗೆಗಳಿಂದ ವಿದ್ಯಾರ್ಥಿಗಳು ಸೇರಿದಂತೆ ಪೋಷಕರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ಹಾದಿ ಹಿಡಿದಿದ್ದರು. ಚಿತ್ರದುರ್ಗ ನಗರದಲ್ಲಿರುವ ಡಿಡಿಪಿಐ ಕಚೇರಿಗೂ ಮುತ್ತಿಗೆ ಹಾಕಿ ಗಮನ ಸೆಳೆದಿದ್ದರು. ಆದರೆ, ಯಾವ ಪ್ರಯೋಜನವೂ ಆಗಿರಲಿಲ್ಲ. ಜಿಲ್ಲಾಡಳಿತದಿಂದ ಪ್ರತಿಭಟನೆಗೆ ಮನ್ನಣೆ ಸಿಗದೇ ಇರುವುದರಿಂದ ಸಿಎಂ ಗೃಹ ಕಚೇರಿ ಎದುರು ಪ್ರತಿಭಟನೆ ನಡೆಸಿ ಸಿಎಂ ಕುಮಾರಸ್ವಾಮಿಯವರಿಗೆ ಅಹವಾಲು ಸಲ್ಲಿಸಿದ್ದರು. ಇದರ ಫಲಶೃತಿ ಎಂಬಂತೆ ಇಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಆಲಘಟ್ಟ ಶಾಲೆಯ ಸ್ಥಳಾಂತರವನ್ನು ರದ್ದುಗೊಳಿಸಿ ಆದೇಶಿಸಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರ ಹೋರಾಟಕ್ಕೆ ಮಾನ್ಯತೆ ಸಿಕ್ಕಂತಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv