‘ಭ್ರಷ್ಟಾಚಾರ ಮತ್ತು ಹಣ ಸೋರಿಕೆ ನಿಲ್ಲಿಸಿ, ಉಚಿತ ಪಾಸ್ ನೀಡಿ’

ಬೆಂಗಳೂರು: ಉಚಿತ ಬಸ್ ಪಾಸ್ ಯೋಜನೆ ಅನುಷ್ಠಾನಗೊಳಿಸಿದರೆ ಸರ್ಕಾರಕ್ಕೆ ₹ 630 ಕೋಟಿ ಹೆಚ್ಚುವರಿ ಹೊರೆ ಆಗುತ್ತದೆ ಎಂದು ಸಾರಿಗೆ ಸಚಿವರ ಡಿ.ಸಿ.ತಮ್ಮಣ್ಣ ನೀಡಿರುವ ಹೇಳಿಕೆಗೆ ಖಂಡನೆ ವ್ಯಕ್ತವಾಗಿದೆ. ಇಲಾಖೆಯೊಳಗಿನ ಭ್ರಷ್ಟಾಚಾರ ಮತ್ತು ಹಣ ಸೋರಿಕೆ ತಡೆದು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್​ ನೀಡಿ ಎಂದು ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ಆಗ್ರಹಿಸಿದೆ.

AIDSO, AIDYO, ಮತ್ತು AIMSS ನೇತೃತ್ವದಲ್ಲಿ ನಗರದ ವಿವಿಧ ಕಾಲೇಜುಗಳಿಂದ ನೂರಾರು ವಿದ್ಯಾರ್ಥಿಗಳು ಉಚಿತ ಬಸ್ ಪಾಸ್​ ನೀಡಿ ಎಂದು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಅಜಯ್ ಕಾಮತ್, ಸಾರ್ವಜನಿಕ ಬಸ್​ಗಳಲ್ಲಿ ಮೇಕೆಗಳ ಹಿಂಡಿನಂತೆ ವಿದ್ಯಾರ್ಥಿಗಳು ಪ್ರಯಾಣಿಸುತ್ತಿಲ್ಲವೇ? ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್​ ಒದಗಿಸಿದರೆ ಸಾರಿಗೆ ಇಲಾಖೆ ನಷ್ಟವನ್ನು ಅನುಭವಿಸುವುದಿಲ್ಲ ಎಂದು ಹೇಳಿದರು.

ಅಲ್ಲದೇ, ಹಲವು ವರ್ಷಗಳ ವಿದ್ಯಾರ್ಥಿಗಳ ಹೋರಾಟದ ನಂತರ ಹಿಂದಿನ ರಾಜ್ಯ ಸರ್ಕಾರ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್​ ಘೋಷಿಸಿದೆ. ಹೊಸ ಸರ್ಕಾರದ ರಚನೆಯ ನಂತರ, ಸಾರಿಗೆ ಸಚಿವರು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುತ್ತೇವೆ ಎಂದು ಭರವಸೆ ನೀಡಿದ್ರೂ ಯೋಜನೆ ಜಾರಿಯಾಗಿಲ್ಲ ಎಂದರು. ಪ್ರತಿಭಟನಾ ನಿರತ ವಿದ್ಯಾರ್ಥಿಗಳು ನಗರದ ಟೌನ್ ಹಾಲ್​ನಿಂದ ಹೊರಟು ಮೈಸೂರು ಬ್ಯಾಂಕ್ ಸರ್ಕಲ್ ತಲುಪಿ, ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv