ಶಿವಮೊಗ್ಗದ ಪ್ರತಿಭೆ ಸ್ಟ್ಯಾನಿ, ಭಾರತದ 58ನೇ ಗ್ರ್ಯಾಂಡ್​ ಮಾಸ್ಟರ್..!

ಶಿವಮೊಗ್ಗ: ಆತ ಬಾಲ್ಯದಲ್ಲೇ ಚದುರಂಗ ಆಟವನ್ನು ಮೆಚ್ಚಿಕೊಂಡಿದ್ದ. ಚದುರಂಗದ ಕಾಯಿಗಳು ಆತನ ಬೆರಳಿನ ಮಾಂತ್ರಿಕ ಶಕ್ತಿಗೆ ಮಣಿದಿದ್ದವು. ಅದರ ಪರಿಣಾಮ ಚದುರಂಗದ ಸ್ಪರ್ಧೆಗಳಲ್ಲಿ ಎದುರಾಳಿಯನ್ನು ಮಣಿಸುತ್ತಾ ಇಂದು ರಾಜ್ಯದ ಅತ್ಯಂತ ಕಿರಿಯ ಗ್ರ್ಯಾಂಡ್​ ಮಾಸ್ಟರ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಭಾರತದ 58ನೇ ಗ್ರ್ಯಾಂಡ್​ ಮಾಸ್ಟರ್​ ಆಗಿರುವ ಶಿವಮೊಗ್ಗ ನಿವಾಸಿ ಜಿ.ಎ. ಸ್ಟ್ಯಾನಿ (26) ಅವರ ಯಶೋಗಾಥೆಯಿದು. ಆಂಥೋನಿ ಜ್ಞಾನಪ್ರಕಾಶ್​ ಮತ್ತು ಲಿಜಿ ದಂಪತಿಯ ಪುತ್ರ ಸ್ಟ್ಯಾನಿಗೆ ಬಾಲ್ಯದಿಂದಲೇ ಚೆಸ್​ ಆಟದ ಮೇಲೆ ವಿಶೇಷ ಆಸಕ್ತಿ. ಚಿಕ್ಕಪ್ಪನ ಜೊತೆ ಚೆಸ್​ ಆಡುತ್ತಲೇ ಬೆಳೆದ ಸ್ಟ್ಯಾನಿಯಲ್ಲಿದ್ದ ಕುತೂಹಲವನ್ನು ಗಮನಿಸಿದ ಪೋಷಕರು 4ನೇ ತರಗತಿ ಓದುತ್ತಿದ್ದ ಸ್ಟ್ಯಾನಿಯನ್ನು ಹೆಚ್ಚಿನ ತರಬೇತಿಗೆ ಶಿವಮೊಗ್ಗದ ನಳಂದ ಚೆಸ್​ ಅಕಾಡೆಮಿಯ ಶ್ರೀ ಕೃಷ್ಣ ಉಡುಪ ಅವರ ಬಳಿ ಸೇರಿಸಿದರು. ಆ ವೇಳೆಗಾಗಲೇ ಚದುರಂಗದಾಟದ ಮೇಲೆ ನಿಯಂತ್ರಣ ಹೊಂದಿದವರಂತೆ ಕಾಯಿಗಳನ್ನು ಮುನ್ನಡೆಸುವುದನ್ನು ಕಂಡ ಶ್ರೀ ಕೃಷ್ಣ ಉಡುಪ ಈ ಹುಡುಗ ಮುಂದೆ ಚೆಸ್​ನಲ್ಲಿ ಬಹುದೊಡ್ಡ ಸಾಧನೆ ಮಾಡುತ್ತಾನೆ ಎಂದು ಭವಿಷ್ಯ ನುಡಿದಿದ್ದರು.

ಬೆಳೆಯುವ ಪೈರು ಮೊಳಕೆಯಲ್ಲಿ..!

https://www.youtube.com/watch?v=3MFLqC02olc


ಇನ್ನು, ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ 9ನೇ ವಯಸ್ಸಿಗೆ ಅಂದರೆ 2002ರಲ್ಲಿ ನಡೆದ ಕರ್ನಾಟಕ ಸ್ಟೇಟ್​ ಅಂಡರ್​ -9 ಚಾಂಪಿಯನ್​ ಶಿಪ್​ನಲ್ಲಿ ಪ್ರಶಸ್ತಿ ಗಳಿಸುವ ಮೂಲಕ ಸ್ಟ್ಯಾನಿ ಎಲ್ಲರ ಗಮನ ಸೆಳೆದಿದ್ದನು. ಇದಾದ ನಂತರ ವಯೋಮಾನಕ್ಕನುಗುಣವಾಗಿ ರಾಜ್ಯಮಟ್ಟದ ಹಲವಾರು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಾ ಬಂದ ಸ್ಟ್ಯಾನಿ 17ನೇ ವಯಸ್ಸಿನಲ್ಲಿ 2010ರಲ್ಲಿ ಜಮ್ಮುವಿನಲ್ಲಿ ನಡೆದ ರಾಷ್ಟ್ರಮಟ್ಟದ 17 ವರ್ಷದೊಳಗಿನ ಚೆಸ್​ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ತೋರುವ ಮೂಲಕ 2012ರಲ್ಲಿ ಬ್ರೆಜಿಲ್​ನಲ್ಲಿ ನಡೆದ ವರ್ಲ್ಡ್​ ಯೂಥ್​ ಚಾಂಪಿಯನ್​ ಶಿಪ್​ಗೆ ಆಯ್ಕೆಯಾಗಿದ್ದು ದೊಡ್ಡ ತಿರುವು ನೀಡಿತು.
ಇನ್ನು 2013ರಲ್ಲಿ ಗ್ರೀಸ್​ನಲ್ಲಿ ನಡೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನದೊಂದಿಗೆ ಇಂಟರ್​ ನ್ಯಾಷನಲ್​ ಮಾಸ್ಟರ್​ ಟೈಟಲ್​ನ್ನು ಮುಡಿಗೇರಿಸಿಕೊಳ್ಳುವುದರೊಂದಿಗೆ ಈ ಸಾಧನೆ ಮಾಡಿದ ಕರ್ನಾಟಕದ 2ನೇ ಕಿರಿಯ ವಯಸ್ಸಿನ ಆಟಗಾರ ಎಂಬ ಕೀರ್ತಿಗೂ ಭಾಜನರಾದರು. ಈ ತನಕ ವಿಶ್ವದ ವಿವಿಧ 25 ದೇಶಗಳಲ್ಲಿ ನಡೆದಿರುವ ಚೆಸ್​ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ಸ್ಟ್ಯಾನಿ ಕಳೆದ ಡಿಸೆಂಬರ್​ನಲ್ಲಿ ಜಮ್ಮುವಿನಲ್ಲಿ ನಡೆದ ನ್ಯಾಷನಲ್​ ಸೀನಿಯರ್​ ಚೆಸ್​ ಚಾಂಪಿಯನ್​ ಶಿಪ್​ನಲ್ಲಿ ನಾಲ್ಕು ಜನ ಗ್ರ್ಯಾಂಡ್​ ಮಾಸ್ಟರ್​ಗಳನ್ನು ಮಣಿಸುವುದರೊಂದಿಗೆ ಚದುರಂಗ ಆಟದಲ್ಲಿ ಅತ್ಯುನ್ನತ ಸಾಧನೆಯಾದ ಗ್ರ್ಯಾಂಡ್​ ಮಾಸ್ಟರ್​ ಪದವಿಯನ್ನು ಪಡೆದು ಭಾರತದ 58ನೇ ಹಾಗೂ ಕರ್ನಾಟದದ 2ನೇ ಗ್ರ್ಯಾಂಡ್​ ಮಾಸ್ಟರ್​ ಆಗಿ ಹೊರ ಹೊಮ್ಮಿದ್ದಾರೆ. ಅಲ್ಲದೆ ಪ್ರಸ್ತುತ ಫಿಡೆ ಇಎಲ್​ಒ 2,517 ಅಂಕದೊಂದಿಗೆ ಕರ್ನಾಟಕದ ನಂಬರ್​ 1 ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ.

ಓದಿನಲ್ಲೂ ಉತ್ತಮ ಸಾಧನೆ..
ಚದುರಂಗದಾಟವೇ ತನ್ನ ಬದುಕು ಎಂದು ಭಾವಿಸಿರುವ ಸ್ಟ್ಯಾನಿ ಓದಿನಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ. ಶಿವಮೊಗ್ಗದ ಪಿಇಎಸ್​ನಲ್ಲಿ ಬಿಕಾಂ ಹಾಗೂ ಚೆನ್ನೈನ ಎಸ್​ಆರ್​ಎಂ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿರುವ ಸ್ಟ್ಯಾನಿ 2011 ಬಳಿಕ, ಬ್ರೆಜಿಲ್​, ಶ್ರೀಲಂಕಾ, ಯುನೈಟೆಡ್​ ಕಿಂಗ್​ಡಮ್, ಇಟಲಿ, ನಾರ್ವೆ, ಸ್ಪೇನ್​, ಫ್ರಾನ್ಸ್​, ಒಡಿಶಾ, ಗೋವಾ ಮೊದಲಾದೆಡೆ ನಡೆದ ನ್ಯಾಷನಲ್​, ಏಷಿಯಾ ಮತ್ತು ಇಂಟರ್​ ನ್ಯಾಷನಲ್​ ಚೆಸ್​ ಪಂದ್ಯಾವಳಿಯಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಚೆಸ್​ ಕ್ಷೇತ್ರದಲ್ಲಿ ಹೆಚ್ಚಿನ ಕಲಿಕೆ ಮತ್ತು ಅಭ್ಯಾಸಕ್ಕೆ ಅವಕಾಶವೇ ಇಲ್ಲದಂತಹ ಊರಿನಲ್ಲಿ ಸ್ಟ್ಯಾನಿ ಮಾಡಿರುವ ಸಾಧನೆ ಎಂತಹವರನ್ನೂ ಚಕಿತಗೊಳಿಸುತ್ತದೆ. ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿರುವ ಸ್ಟ್ಯಾನಿಯ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಏಕಲವ್ಯ ಪ್ರಶಸ್ತಿಯನ್ನು 2011ರಲ್ಲಿ ನೀಡಿ ಗೌರವಿಸಿದೆ.

ಉನ್ನತ ಹುದ್ದೆಯ ಆಹ್ವಾನ ತಿರಸ್ಕಾರ..!
ಕಡಿಮೆ ವಯಸ್ಸಿನಲ್ಲಿ ಭಾರತವೇ ಗಮನಿಸುವಂತಹ ಸಾಧನೆ ಮಾಡಿರುವ ಹಾಗೂ ಅನೇಕ ಪ್ರತಿಷ್ಠಿತ ಕಂಪನಿಗಳಲ್ಲಿ ಉನ್ನತ ಹುದ್ದೆಯ ಆಹ್ವಾನವನ್ನು ತಿರಸ್ಕರಿಸಿರುವ ಸ್ಟ್ಯಾನಿ ಇಂದಿಗೂ ದಿನಕ್ಕೆ ಐದಾರು ಗಂಟೆ ಚೆಸ್​ ಆಡುವುದರ ಜೊತೆಗೆ ಚೆಸ್​ ಕುರಿತಂತೆ ವಿಶ್ವದ ಪ್ರಸಿದ್ಧ ಆಟಗಾರರು ಬರೆದಿರುವ ಪುಸ್ತಕಗಳನ್ನು ಅಧ್ಯಯನ ಮಾಡುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಆರ್ಥಿಕ ಸಂಕಷ್ಟದ ನಡುವೆಯೂ ಮಗನ ಚೆಸ್​ ಕಲಿಕೆಗೆ ಬೆನ್ನು ತಟ್ಟುತ್ತಲೇ ಬಂದಿರುವ ಪೋಷಕರು ಹಾಗೂ ಕುಟುಂಬ ವರ್ಗದವರು ಸ್ಟ್ಯಾನಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ಆರ್ಥಿಕ ನೆರವು ಸಿಕ್ಕಿರುವುದನ್ನು ಸ್ಮರಿಸಿಕೊಳ್ಳುವ ಪೋಷಕರು ಚೆಸ್​ನಂತಹ ಕ್ರೀಡೆಗೆ ಪ್ರಾಯೋಜಕರು ಮುಂದೆ ಬಾರದಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಾರೆ.
ಒಟ್ಟಿನಲ್ಲಿ ಕುತೂಹಲಕ್ಕೆಂದು ಆಡಲಾರಂಭಿಸಿದ ಆಟದ ಒಳಪಟ್ಟುಗಳನ್ನು ಗಂಭೀರವಾಗಿ ಕಲಿತು ಅದನ್ನೇ ಬದುಕಾಗಿಸಿಕೊಂಡಿರುವ ಸ್ಟ್ಯಾನಿಯ ಸಾಧನೆಗೆ ಹ್ಯಾಟ್ಸಾಫ್​ ಹೇಳಲೇ ಬೇಕು.

ವಿಶೇಷ ವರದಿ: ಪ್ರಸನ್ನ, ಫಸ್ಟ್​​ನ್ಯೂಸ್​, ಶಿವಮೊಗ್ಗ